ನವದೆಹಲಿ: ಛತ್ರಸಾಲ್ ಸ್ಟೇಡಿಯಂನಲ್ಲಿ ಕುಸ್ತಿಪಟುವೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರಿಗೆ ದೆಹಲಿ ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಭಾನುವಾರ ಸಂಜೆ ಸುಶೀಲ್ ಕುಮಾರ್ ವಿರುದ್ಧ ನೋಟಿಸ್ ಜಾರಿ ಮಾಡಿರುವುದಾಗಿ ಮತ್ತು ಪೊಲೀಸರು ಈಗಾಗಲೇ ಗಲಾಟೆಯಲ್ಲಿ ಗಾಯಗೊಂಡಿರುವವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಾಡಿಗೆ ಇದ್ದ ಮನೆಯನ್ನು ಕಾಲಿ ಮಾಡುವ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದಿದ್ದಾರೆ.
ಛತ್ರಸಾಲ್ ಸ್ಟೇಡಿಯಂನ ಪಾರ್ಕಿಂಗ್ ಪ್ರದೇಶದಲ್ಲಿ ಯುವ ಕುಸ್ತಿಪಟು ಸಾಗರ್ ಧಂಕಡ್ ಎಂಬ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಗಂಭೀರ ಹಲ್ಲೆ ಮಾಡಲಾಗಿತ್ತು ಘಟನೆಯಲ್ಲಿ ಸಾಗರ್ ಮೃತನಾದರೆ, ಆತನ ಸ್ನೇಹಿತ ಗಂಭೀರ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಸುಶೀಲ್ ಕುಮಾರ್ ಅವರ ಹೆಸರು ಕೇಳಿ ಬಂದ ಬೆನ್ನಲ್ಲೇ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ಸುಶೀಲ್ ಪತ್ತೆಗಾಗಿ ಪೊಲೀಸರು ತಂಡವನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.
ಕುಮಾರ್ ಮೇಲೆ ಎಫ್ಐಆರ್ ದಾಖಲಾಗಿದೆ. ಅವರು ಈಗ ತಲೆಮರೆಸಿಕೊಂಡಿದ್ದಾರೆ. ಆದರೆ ಅವರನ್ನು ಟ್ರೇಸ್ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಬಂಧಿಸಲು ಪಕ್ಕದ ರಾಜ್ಯಗಳಲ್ಲೂ ದಾಳಿ ನಡೆಸಲಾಗುತ್ತಿದೆ ಎಂದು ಆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗಲಾಟೆಯಲ್ಲಿ ಗಾಯಕ್ಕೊಳಗಾಗಿರುವ ವ್ಯಕ್ತಿ, ಘಟನೆ ನಡೆದ ಸ್ಥಳದಲ್ಲಿ ಸುಶೀಲ್ ಕುಮಾರ್ ಇದ್ದರೆಂದು ಮಾಹಿತಿ ನೀಡಿದ್ದಾರೆ. ಜಗಳದಲ್ಲಿ ಕುಮಾರ್ ಜೊತೆಗೆ ಅಜಯ್, ಪ್ರಿನ್ಸ್ ದಲಾಲ್, ಸೋನು, ಸಾಗರ್, ಅಮಿತ್ ಮತ್ತು ಇನ್ನು ಕೆಲವರಿದ್ದರೆಂದು ತಿಳಿದು ಬಂದಿದ್ದು, 24 ವರ್ಷದ ದಲಾಲ್ರನ್ನು ಬಂಧಿಸಲಾಗಿದೆ.
ಇದನ್ನು ಓದಿ: ಸ್ಟೇಡಿಯಂನಲ್ಲಿ ಕುಸ್ತಿಪಟು ಕೊಲೆ.. ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹುಡುಕಾಟದಲ್ಲಿ ಪೊಲೀಸ್