ನವದೆಹಲಿ: ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಸ್ಟಾರ್ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ, ಭವಿಷ್ಯದಲ್ಲಿ 90 ಮೀಟರ್ ದೂರ ಎಸೆದರೆ ತಮ್ಮನ್ನು ವಿಶ್ವದ ಶ್ರೇಷ್ಠ ಎಸೆತಗಾರರ ಲಿಸ್ಟ್ನಲ್ಲಿ ಸೇರಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀರಜ್ ಟೋಕಿಯೋ ಒಲಿಂಪಿಕ್ಸ್ನಲ್ಲಿ 87.58 ಮೀಟರ್ ಎಸೆದು ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದರು. ಇದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ ಮೊದಲ ಚಿನ್ನದ ಪದಕವಾಗಿತ್ತು. ಇದೀಗ ಅವರು 90 ಮೀಟರ್ ಎಸೆದು ವಿಶ್ವ ಶ್ರೇಷ್ಠರ ಗುಂಪಿನಲ್ಲಿ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ. 88.07 ಅವರ ವೈಯಕ್ತಿಕ ಅತ್ಯುತ್ತಮ ದಾಖಲೆಯಾಗಿದೆ.
ಪದಕ ಗೆಲ್ಲುವುದು ಒಂದು ವಿಷಯ, ದೂರ ಎಸೆದು ಮೈಲಿಗಲ್ಲು ನಿರ್ಮಿಸುವುದು ಮತ್ತೊಂದು ವಿಷಯವಾಗಿದೆ. 90 ಮೀಟರ್ ಕ್ರಾಸ್ ಮಾಡುವುದು ನನ್ನನ್ನು ವಿಶ್ವ ಅತ್ಯುತ್ತಮ ಎಸೆತಗಾರರ ಪಟ್ಟಿಗೆ ಸೇರಿಸಲಿದೆ ಎಂದು ನೀರಜ್ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ತಿಳಿಸಿದ್ದಾರೆ.
ನಾನು ಈಗಾಗಲೇ 90 ಮೀಟರ್ಗೆ ಹತ್ತಿರವಾಗಿದ್ದೇನೆ ಮತ್ತು ಶೀಘ್ರದಲ್ಲೇ ಅದಕ್ಕೆ ಗುರಿಯಿಡಲಿದ್ದೇನೆ, ಆದರೆ ಅದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಲ್ಲ. ಆ ಗುರಿಯನ್ನು ತಲುಪಲಾಗದಿದ್ದರೇ ಏನೋ ಕಳೆದುಕೊಳ್ಳುತ್ತೇನೆ ಎನ್ನುವ ಒತ್ತಡವೇನೂ ನನ್ನ ಮೇಲೆ ಇಲ್ಲವೆಂದು ಚೋಪ್ರಾ ಸ್ಪಷ್ಟಪಡಿಸಿದ್ದಾರೆ.
ಗುರಿ ತಲುಪಲು ಕೇವಲ 2 ಮೀಟರ್ ಅಂತರವಿದೆ. ಅದೇನು ಕಡಿಮೆ ಏನಲ್ಲ, ಆದರೆ ಅದು ಅಸಾಧ್ಯವಾದದ್ದೆಂದು ಕೂಡ ನಾನು ಭಾವಿಸಲ್ಲ, ಏಕೆಂದರೆ ನನಗೆ ತರಬೇತಿ ಉತ್ತಮವಾಗಿದೆ. ಅದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಲ್ಲ. ಈ ವರ್ಷ ನಾನದನ್ನು ಬ್ರೇಕ್ ಮಾಡಬೇಕಾದ ತಡೆಗೋಡೆ ಎಂದುಕೊಂಡಿದ್ದೇನೆ ಎಂದು ನೀರಜ್ ಚೊಪ್ರಾ ಹೇಳಿದ್ದಾರೆ.
ಇದನ್ನೂ ಓದಿ:IND vs SA Test: ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ತಲುಪಿದ ಜಸ್ಪ್ರೀತ್ ಬುಮ್ರಾ