ನವದೆಹಲಿ : ಕೋವಿಡ್-19 ಸಾಂಕ್ರಾಮಿಕದ ಭೀತಿಯಿಂದ ಡಿಸೆಂಬರ್ 18ರಂದು ನಡೆಯಬೇಕಿದ್ದ ಬಾಕ್ಸಿಂಗ್ ಫೆಡೆರೇಷನ್ ಚುನಾವಣೆಯನ್ನು ಮುಂದೂಡಲಾಗಿದೆ.
ಡಿಸೆಂಬರ್ 18ರಂದು ಗುರುಗ್ರಾಮ್ನಲ್ಲಿ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾದ ಸಾಮಾನ್ಯ ಜನರಲ್ ಸಭೆ ನಡೆಯಬೇಕಿತ್ತು. ಅಂದೇ ಚುನಾವಣೆ ಕೂಡ ಆಯೋಜನೆಯಾಗಿತ್ತು. ಆದರೆ, ಬಹುಪಾಲು ರಾಜ್ಯ ಸಂಸ್ಥೆಗಳು ಸಾಂಕ್ರಾಮಿಕವಿರುವುದರಿಂದ ಚುನಾವಣೆಯನ್ನು ಮುಂದೂಡಲು ಬಯಸಿವೆ. ಈ ಚುನಾವಣೆ ಸೆಪ್ಟೆಂಬರ್ನಲ್ಲಿ ನಿಗದಿಯಾಗಿತ್ತು. ಆದರೆ, ಅಂದು ಕೊರೊನಾ ಏರಿಕೆ ದರ ಹೆಚ್ಚಿದ್ದರಿಂದ ಡಿಸೆಂಬರ್ಗೆ ಮುಂದೂಡಲಾಗಿತ್ತು.
"ಬಿಎಫ್ಐನ ರಾಜ್ಯ ಸಂಸ್ಥೆಗಳು ರಿಟರ್ನಿಂಗ್ ಆಫೀಸರ್ ಜಸ್ಟೀಸ್ ರಾಜೇಶ್ ಟಂಡನ್ ಅವರಿಗೆ ಪತ್ರ ಬರೆದಿದ್ದು, ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಚುನಾವಣೆ ಮುಂದೂಡುವುದು ಉತ್ತಮ ಎಂದು ಮನವಿ ಮಾಡಿಕೊಂಡಿವೆ" ಎಂದು ಬಿಎಫ್ಐನ ಅಧ್ಯಕ್ಷ ಅಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ರಾಜ್ಯ ಸಂಸ್ಥೆಗಳ ಮನವಿ ಪುರಸ್ಕರಿಸಿದ್ದು, ಸಾಮಾನ್ಯ ಸಭೆ ಮತ್ತು ಚುನಾವಣೆಯನ್ನು ಮುಂದೂಡಲು ರಿಟರ್ನಿಂಗ್ ಆಫೀಸರ್ ಶಿಪಾರಸು ಮಾಡಿದ್ದಾರೆ. ಇದನ್ನು ಭಾರತೀಯ ಒಲಿಂಪಿಕ್ಸ್ ಒಕ್ಕೂಟ ಕೂಡ ಖಚಿತ ಪಡಿಸಿದೆ ಎಂದು ತಿಳಿದು ಬಂದಿದೆ.
ಆದರೆ, ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆಯಬೇಕಾದ್ರೆ, ಬಿಎಫ್ಐ ಈ ವರ್ಷದ ಅಂತ್ಯದೊಳಗೆ ಚುನಾವಣೆ ನಡೆಸಬೇಕಿದೆ. ಪ್ರಸ್ತುತ ಚುನಾವಣೆಯನ್ನು ಮುಂದೂಡಲಾಗಿದ್ದು, ಮುಂದಿನ ಚುನಾವಣೆಯ ದಿನಾಂಕವನ್ನು ಫೆಡರೇಷನ್ ಖಚಿತಪಡಿಸಿಲ್ಲ. ಹಾಲಿ ಅಧ್ಯಕ್ಷ ಅಜಯ್ ಸಿಂಗ್ ಡಿಸೆಂಬರ್ 2ರಂದು ಚುನಾವಣೆಗೆ ನಾಮನಿರ್ದೇಶನ ಮಾಡಿದ್ದಾರೆ. ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಲೀಡರ್ ಆಶೀಷ್ ಶೆಲರ್ ಅವರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.