ಬೆಂಗಳೂರು: ಗೊಂದಲದಿಂದ ಕೂಡಿದ್ದ ಬೆಂಗಾಲ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 40-39ರ ಒಂದು ಅಂಕದ ಅಂತರದ ಸೋಲು ಕಂಡು ನಿರಾಸೆ ಅನುಭವಿಸಿದೆ.
ಬೆಂಗಳೂರು ಬುಲ್ಸ್ 27-20ರಲ್ಲಿ ಮುನ್ನಡೆ ಪಡೆದುಕೊಂಡಿದ್ದ ವೇಳೆ ಬೆಂಗಾಲ್ ವಾರಿಯರ್ಸ್ ಪರ ಕೋರ್ಟಿನಲ್ಲಿ ಕೊನೆಯ ಆಟಗಾರನಾಗಿದ್ದ ನಬೀಬಖ್ಷ್ ರೈಡಿಂಗ್ ವೇಳೆ ಟಚ್ ಮಾಡುವ ಯತ್ನದಲ್ಲಿ ವಿಫಲರಾಗಿ ಲಾಬಿ ಲೈನ್ ಕ್ರಾಸ್ ಮಾಡಿದ್ದರು. ಲೆಫ್ಟ್ ಕಾರ್ನರ್ನಲ್ಲಿದ್ದ ಮಹೇಂದರ್ ಸಿಂಗ್, ನಬೀಬಖ್ಷ್ ಅವರನ್ನು ಟ್ಯಾಕಲ್ ಮಾಡಲು ಯತ್ನಿಸಿದರು. ಈ ವೇಳೆ ತಂಡದ ಎಲ್ಲಾ ಆಟಗಾರರು ನಬೀಬಕ್ಷ್ ಮೇಲೆ ಬಿದ್ದಿದ್ದರಿಂದ ಬುಲ್ಸ್ ತಂಡದ ಎಲ್ಲಾ ಆಟಗಾರರನ್ನು ಔಟ್ ಎಂದು ತೀರ್ಪು ನೀಡಲಾಯಿತು. ಇದರಿಂದ ಬೋನಸ್ ಸೇರಿದಂತೆ 8 ಅಂಕ ಬೆಂಗಾಲ್ಗೆ ಮತ್ತು ಒಂದು ಅಂಕ ಬುಲ್ಸ್ಗೆ ನೀಡಲಾಯಿತು.
27-20 ಇದ್ದ ಬುಲ್ಸ್ ಮುನ್ನಡೆ ಈ ರೈಡ್ ನಂತರ 28-29 ತಲುಪಿತು. ಈ ದಿಢೀರ್ ತೀರ್ಪಿನಿಂದ ಗೊಂದಲಕ್ಕೊಳಗಾದ ಬೆಂಗಳೂರು ಬುಲ್ಸ್ ಬಳಿಕ ಆಟದ ಕಡೆ ಆಸಕ್ತಿ ಕಳೆದುಕೊಂಡಂತೆ ಕಂಡುಬಂದಿತಲ್ಲದೆ, ನಂತರ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮುನ್ನಡೆ ಪಡೆಯುತ್ತ ಸಾಗಿತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆದರೂ ಕೊನೆಯ ಒಂದೂವರೆ ನಿಮಿಷದಲ್ಲಿ 32-38ರಲ್ಲಿ ಹಿನ್ನಡೆ ಅನುಭವಿಸಿದ್ದ ಬುಲ್ಸ್ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಕೊನೆಯ 37 ಸೆಕೆಂಡ್ ವೇಳೆ 38-40ಕ್ಕೆ ತಂದು ನಿಲ್ಲಿಸಿತ್ತು. ಆದರೆ ಕೊನೆಯ 30 ಸೆಕೆಂಡ್ಗಳನ್ನು ವ್ಯರ್ಥ ಮಾಡಿದ ವಾರಿಯರ್ಸ್ ರೈಡರ್ ತಮ್ಮ ತಂಡ ಒಂದು ಅಂಕದಿಂದ ಗೆಲ್ಲಲು ನೆರವಾದರು.
ಬೆಂಗಳೂರು ತಂಡದ ಪರ ಪವನ್ ಶೆರಾವರ್ 13 , ಚಂದ್ರನ್ ರಂಜಿತ್ 8, ಸೌರಬ್ ನಂಡಲ್ 4 ಟ್ಯಾಕಲ್, ಮಹೇಂದ್ರ ಮತ್ತು ಅಂಕಿತ್ ತಲಾ 2 ಟ್ಯಾಕಲ್ ಅಂಕ ಸಂಪಾದಿಸಿದರು.
ಇತ್ತ ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ ಸಿಂಗ್ 9, ಸುಖೇಶ್ ಹೆಗ್ಡೆ 7, ನಬೀಬಖ್ಷ್ 6 , ಮೊಹಜೆರ್ಮಿಘನಿ 3, ಅಮಿತ್ ಮತ್ತು ರಾಣಾ ಸಿಂಗ್ ತಲಾ 2 ಟ್ಯಾಕಲ್ ಅಂಕ ಪಡೆದರು. ವಿವಾದಿತ 8 ಹೆಚ್ಚುವರಿ ಅಂಕ ಪಡೆದಿದ್ದರಿಂದ ಬೆಂಗಾಲ್ ವಾರಿಯರ್ಸ್ ಗೆಲ್ಲುವಂತಾಯಿತು.
ಇದನ್ನೂ ಓದಿ:ಬಿಸಿಸಿಐ ವಾರ್ಷಿಕ ಗುತ್ತಿಗೆ: A+ ವರ್ಗಕ್ಕೆ ರಾಹುಲ್-ಪಂತ್ ಬಡ್ತಿ ಸಾಧ್ಯತೆ, ಪೂಜಾರ-ರಹಾನೆ ಭವಿಷ್ಯ ಅತಂತ್ರ!