ಬೆಂಗಳೂರು: ಕಾರ್ಟಿಂಗ್ ಮತ್ತು ಫಾರ್ಮುಲಾ - 4ನಲ್ಲಿ ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಬೆಂಗಳೂರಿನ ಹುಡುಗ ಯಶ್ ಆರಾಧ್ಯ ಇದೀಗ ಎಫ್‍ಐಎ, ಎಫ್‍ಎಫ್‍ಎಸ್‍ಎ ಫ್ರೆಂಚ್ ಫಾರ್ಮುಲಾ 4 -2020ರ ರೇಸಿಂಗ್‍ಗೆ ಸಜ್ಜಾಗಿದ್ದಾರೆ.
ಎಫ್‍ಐಎ ಫಾರ್ಮುಲಾ 4 ಫ್ರೆಂಚ್ ಕೂಟವನ್ನು ಫ್ರೆಂಚ್ ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಅಕಾಡೆಮಿ (ಎಫ್‍ಎಫ್‍ಎಸ್‍ಎ ಅಕಾಡೆಮಿ), ವಿಶ್ವಮಟ್ಟದ ಮೋಟರ್ ಕ್ರೀಡೆಗಳ ವ್ಯವಸ್ಥಾಪನಾ ಸಂಸ್ಥೆಯಾಗಿರುವ ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಡೆಲ್ ಆಟೊಮೊಬೈಲ್ ಸಹಯೋಗದಲ್ಲಿ ಆಯೋಜಿಸಿದೆ.
ಈ ಸರಣಿಯಲ್ಲಿ ಭಾಗವಹಿಸುತ್ತಿರುವ ಏಕೈಕ ಭಾರತೀಯ ಪ್ರತಿಭೆ ಎನಿಸಿರುವ ಯಶ್, ಫ್ರಾನ್ಸ್ನ ಕ್ಯಾಸ್ಟೆಲೆಟ್‍ನಲ್ಲಿರುವ ಪಾಲ್ ರಿಚರ್ಡ್ ಸರ್ಕ್ಯೂಟ್ನಲ್ಲಿ ನಡೆಯುವ ಎಫ್‍ಐಎ ಫಾರ್ಮುಲಾ 4 ಫ್ರೆಂಚ್ ಟೂರ್ನಿಯ ಮುಕ್ತ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ವಿಶ್ವಾದ್ಯಂತ ವ್ಯಾಪಿಸಿರುವ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಚಾಂಪಿಯನ್‍ಶಿಪ್ ವೇಳಾಪಟ್ಟಿಯನ್ನು ಹಲವು ಬಾರಿ ಬದಲಿಸಲಾಗಿತ್ತು. ಅಂತಿಮವಾಗಿ 2020ರ ಆಗಸ್ಟ್ನಲ್ಲಿ ಚಾಲನೆ ಪಡೆದಿದೆ. ವೀಸಾ ಸಂಬಂಧಿತ ವಿಳಂಬದಿಂದಾಗಿ ಮೊದಲ ಮೂರು ಸುತ್ತುಗಳಲ್ಲಿ ಸ್ಪರ್ಧಿಸಲು ಯಶ್ ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಉಳಿದ ನಾಲ್ಕು ಸುತ್ತುಗಳಲ್ಲಿ ಭಾಗವಹಿಸಲು ಇದೀಗ ಸಜ್ಜಾಗಿದ್ದಾರೆ. ಈ ಮೂಲಕ ಮುಂದಿನ ವರ್ಷ ಯೂರೋಪ್‍ನಲ್ಲಿ ಪ್ರಬಲ ಹೆಜ್ಜೆಯೂರಲು ಸರ್ವ ಸನ್ನದ್ಧರಾಗಿದ್ದಾರೆ.
ಈ ವಾರಾಂತ್ಯವನ್ನು ಎದುರು ನೋಡುತ್ತಿರುವ ಯಶ್, "ಅಂತಿಮವಾಗಿ ಕಾಯುವಿಕೆ ಕೊನೆಗೊಂಡಿದೆ. ಎಲ್ಲ ಪ್ರತಿಕೂಲಗಳ ನಡುವೆಯೂ ನನ್ನ ಬೆಂಬಲಕ್ಕೆ ನಿಂತು ಇದನ್ನು ಸಾಧ್ಯವಾಗಿಸಿದ ಪ್ರಾಯೋಜಕರಿಗೆ ನಾನು ಧನ್ಯವಾದ ಹೇಳುತ್ತಿದ್ದೇನೆ. ಮೊಟ್ಟಮೊದಲ ಬಾರಿಗೆ ಈ ಟ್ರ್ಯಾಕ್‍ಗಳಲ್ಲಿ ರೇಸಿಂಗ್ ನಡೆಸಲು ರೋಮಾಂಚನವಾಗುತ್ತಿದೆ. ನಾನು ಟ್ರ್ಯಾಕ್‍ಗಳ ಮೇಲೆ ಗಮನ ಹರಿಸಿ ಕಲಿಕೆಗೆ ಹಾಗೂ ಕಾರನ್ನು ಸಾಧ್ಯವಾದಷ್ಟು ಬೇಗ ಹೊಂದಿಸಿಕೊಳ್ಳಲು ಮುಂದಾಗುತ್ತೇನೆ. ಅವರಿಗೆ ಹಾಗೂ ದೇಶಕ್ಕೆ ಹೆಮ್ಮೆ ತರಬಲ್ಲೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದ್ದಾರೆ.
ಯಶ್ ಅಕ್ಟೋಬರ್ 2ರಿಂದ 4ರವರೆಗೆ ಮೊದಲ ರೇಸ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಕ್ಟೋಬರ್ 16 ರಿಂದ 18, ನವೆಂಬರ್ 6 ರಿಂದ 8 ಮತ್ತು ನವೆಂಬರ್ 13 ರಿಂದ 18ರಂದು ಫ್ರಾನ್ಸ್ನಲ್ಲಿ ನಡೆಯುವ ನಂತರದ ರೇಸ್‍ಗಳಲ್ಲೂ ಪಾಲ್ಗೊಳ್ಳಲಿದ್ದಾರೆ.
ಜೆ.ಕೆ.ಟೈರ್ನ ಮೋಟರ್ ಸ್ಪೋರ್ಟ್ಸ್ ವಿಭಾಗದ ಮುಖ್ಯಸ್ಥ ಸಂಜಯ್ ಶರ್ಮಾ ಮಾತನಾಡಿ, "ಇಡೀ ವಿಶ್ವ ಭೀಕರ ಸಾಂಕ್ರಾಮಿಕದಿಂದಾಗಿ ಕುಂಟುತ್ತಿದ್ದರೂ, ಈ ಪ್ರತಿಕೂಲದ ನಡುವೆಯೇ ಅವಕಾಶಗಳನ್ನು ಕಂಡುಕೊಳ್ಳುವುದು ಮುಖ್ಯ. ಚಾಂಪಿಯನ್ನರು ರೂಪುಗೊಳ್ಳುವುದೇ ಹೀಗೆ. ಆದಾಗ್ಯೂ ಜಗತ್ತು ಮತ್ತು ಕ್ರೀಡಾಕೂಟಗಳೂ ನಿಧಾನವಾಗಿ ಸುಸ್ಥಿತಿಯತ್ತ ಮರಳುತ್ತಿವೆ. ಭಾರತದ ನಮ್ಮ ಹುಡುಗರು ಜಾಗತಿಕ ವೇದಿಕೆಯಲ್ಲಿ ಮುದ್ರೆಯೊತ್ತಲು ಸಜ್ಜಾಗಿರುವುದು ಸಂತಸದ ವಿಚಾರ. ಯಶ್ ದೇಶೀಯ ಹಾಗೂ ಅಂತಾರಾಷ್ಟ್ರೀಯ ರೇಸಿಂಗ್‍ನಲ್ಲಿ ಮತ್ತೆ ಮತ್ತೆ ತಮ್ಮ ಪ್ರತಿಭೆಯನ್ನು ನಿರೂಪಿಸಲಿದ್ದಾರೆ. ಈ ಬಾರಿಯ ಚಾಂಪಿಯನ್‍ಶಿಪ್‍ನಲ್ಲೂ ಯಶಸ್ಸು ಬಯಸುತ್ತೇವೆ" ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಬಾಲ ಶಕ್ತಿ ಪುರಸ್ಕಾರಕ್ಕೆ 2020ರ ಜನವರಿಯಲ್ಲಿ ಭಾಜನರಾಗಿದ್ದ ಯಶ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಮೋಟರ್ ಸ್ಪೋರ್ಟ್ಸ್ ಪ್ರತಿಭೆ ಎನಿಸಿಕೊಂಡಿದ್ದಾರೆ.