ನವದೆಹಲಿ: ದೇಶದಲ್ಲಿ ದಿನ ಕಳೆದಂತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕ್ರೀಡಾಪಟುಗಳ ತರಬೇತಿಯನ್ನು ಪುನಾರಂಭಿಸಲು ಭಾರತ ಕ್ರೀಡಾ ಪ್ರಾಧಿಕಾರ ಆತುರ ಪಡಬಾರದು ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಇದುವರೆಗೆ 3,500 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆ ತರಬೇತಿ ಪಡೆಯುವಾಗ ಕ್ರೀಡಾಪಟುಗಳು ಅನುಸರಿಸಬೇಕಾದ ಕ್ರೀಡಾ ಸಚಿವಾಲಯವು ಅಂಗೀಕರಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯ ವಿಧಾನಗಳನ್ನು (ಎಸ್‌ಒಪಿ) ಭಾರತ ಕ್ರೀಡಾ ಪ್ರಾಧಿಕಾರ ಬಿಡುಗಡೆ ಮಾಡಿತ್ತು.
ಜೂನ್‌ನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಲಿದೆ ಎಂದು ಊಹಿಸಲಾಗುತ್ತಿದೆ. ಲಾಕ್‌ಡೌನ್ ನಿರ್ಬಂಧಗಳ ಹೊರತಾಗಿಯೂ, ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದ್ದರಿಂದ, ಇಂತಹ ಸನ್ನಿವೇಶದಲ್ಲಿ, ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮುಂದಾಗುಗುತ್ತಿರುವುದು ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಕ್ರೀಡಾಪಟುಗಳು ನಮ್ಮ ದೇಶದ ಆಸ್ತಿ. ಅವರಿಗೆ ಸುರಕ್ಷತೆ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಕೆಲವು ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಅವರು ನಿಸ್ಸಂದೇಹವಾಗಿ ಟೋಕಿಯೋ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ತರಬೇತಿಗಾಗಿ ಹೊರಗೆ ಹೋಗಬೇಕೆ ಅಥವಾ ಬೇಡವೇ ಎಂಬುದು ಕ್ರೀಡಾಪಟುಗಳಿಗೆ ಬಿಟ್ಟಿದ್ದು. ಆದರೆ, ಕ್ರೀಡಾಪಟುಗಳ ಮೇಲಿನ ಈ ಹೊಣೆಗಾರಿಕೆ ಮತ್ತು ಒತ್ತಡವು ರಾಜ್ಯ ಒಕ್ಕೂಟಗಳು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಥವಾ ಸರ್ಕಾರದಿಂದ ಇರಬಾರದು ಎಂದಿದ್ದಾರೆ.
-