ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ರಾಜಧಾನಿ ಶ್ರೀನಗರದಲ್ಲಿ ಬುಧವಾರ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಏಷ್ಯಾದ ಅತಿ ಉದ್ದದ ಸೈಕಲ್ ರೇಸ್‌ಗೆ ಚಾಲನೆ ನೀಡಲಾಯಿತು. ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಆಯೋಜಿಸಿರುವ ಅಲ್ಟ್ರಾ ಸೈಕಲ್ ರೇಸ್ ಅನ್ನು ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ವಿಭಾಗೀಯ ಆಯುಕ್ತ (ಕಾಶ್ಮೀರ) ವಿಜಯ್ ಕುಮಾರ್ ಭಿದುರಿ ಅವರು ಫ್ಲ್ಯಾಗ್ ಆಫ್ ಮಾಡಿ ಉದ್ಘಾಟಿಸಿದರು.
ಏಷ್ಯನ್ ಅಲ್ಟ್ರಾ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಮತ್ತು ವಿಶ್ವ ಅಲ್ಟ್ರಾ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಅನ್ನು ವರ್ಲ್ಡ್ ಅಲ್ಟ್ರಾ ಸೈಕ್ಲಿಂಗ್ ಅಸೋಸಿಯೇಷನ್ ಮತ್ತು ಯುಎಸ್ಎ ಆಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಮೂರು ರೀತಿಯ ಅವಕಾಶಗಳಿದ್ದು ಸೋಲೋ ರೇಸರ್ 12 ದಿನಗಳ ಅವಧಿ, ಎರಡು ಗುಂಪಾಗಿ ಆಡುವವರು 10 ದಿನ ಹಾಗೂ 4 ಗುಂಪಾಗಿ ಭಾಗವಹಿಸುವವರು 8 ದಿನಗಳಲ್ಲಿ ಸ್ಪರ್ಧೆ ಮುಗಿಸಬೇಕಿದೆ.
3,651 ಕಿಮೀ ಉದ್ದದ ಓಟವು ಒಟ್ಟು 1895 ಮೀಟರ್ ಎತ್ತರದಲ್ಲಿ ಶ್ರೀನಗರದಿಂದ ಪ್ರಾರಂಭವಾಯಿತು. ಭಾರತದ ದಕ್ಷಿಣ ತುದಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ರೇಸ್ ಕೊನೆಗೊಳ್ಳುತ್ತದೆ. ಸೈಕಲ್ ಓಟದ ಮಾರ್ಗವು 12 ಪ್ರಮುಖ ರಾಜ್ಯಗಳು, ಮೂರು ಪ್ರಮುಖ ಮಹಾನಗರಗಳು ಮತ್ತು 20 ಕ್ಕೂ ಹೆಚ್ಚು ಪ್ರಮುಖ ನಗರಗಳ ಮೂಲಕ ಹಾದುಹೋಗುತ್ತದೆ. ಭದ್ರತೆ ಮತ್ತು ಸಹಾಯ ತಂಡಗಳು ಸೇರಿದಂತೆ ಕಾರ್ಯಕ್ರಮವನ್ನು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓಟವನ್ನು ಮುಗಿಸಲು ರೈಡರ್‌ಗಳಿಗೆ ಆಯಾ ಸಿಬ್ಬಂದಿ ಸದಸ್ಯರು ಮತ್ತು ಬೆಂಬಲ ವಾಹನಗಳು ಬೆಂಬಲ ನೀಡುತ್ತವೆ. ಸೋಲೋ ರೈಡರ್ಸ್ ಡಾ. ಅಮೃತ್ ಸಮರ್ಥ್, ಸಾಹಿಲ್ ಸಚ್‌ದೇವ, ಸುಮೇರ್ ಬನ್ಸಾಲ್, ಧೀರಜ್ ಕಲ್ಸೈತ್, ಶುಭಂ ದಾಸ್, ಮಹೇಶ್ ಕಿಣಿ, ಅತುಲ್ ಕಾಡು, ವಿಕ್ರಮ್ ಉನಿಯಾಲ್, ಮನೀಶ್ ಸೈನಿ, ಇಂದ್ರಜೀತ್ ವರ್ಧನ್, ಗೀತಾ ರಾವ್ ಮತ್ತು 'ಅಮೀಬಾ' ರವೀಂದ್ರ ರೆಡ್ಡಿ.
ತಂಡಗಳಲ್ಲಿ ಮಹಾ ಸೈಕ್ಲಿಂಗ್ ಸ್ಕ್ವಾಡ್, ಮಹಾರಾಷ್ಟ್ರ ಪೊಲೀಸ್, ಎಡಿಸಿಎ ಮತ್ತು ಅಮರಾವತಿ ರೈಡರ್ಸ್ ಸೇರಿವೆ. ರೇಸ್‌ಗೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ಕುಮಾರ್, ಅಲ್ಟ್ರಾ ಸೈಕಲ್ ರೇಸ್ ಭಾಗವಹಿಸುವವರ ಸಹಿಷ್ಣುತೆ ಮತ್ತು ಉತ್ಸಾಹವನ್ನು ತೋರಿಸುತ್ತದೆ. ಕ್ರೀಡೆಯು ಜೀವನದಲ್ಲಿ ಏನನ್ನಾದರೂ ಸಾಧಿಸುವ ಉತ್ಸಾಹವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ಕಣಿವೆಯ ಮೂಲೆ ಮೂಲೆಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಐಕಾನಿಕ್ ರೇಸ್ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು ಎಂದು ರೇಸ್ ಅಕ್ರಾಸ್ ಇಂಡಿಯಾ (ರೇನ್) ಯೋಜನಾ ನಿರ್ದೇಶಕ ಜಿತೇಂದ್ರ ನಾಯಕ್ ಹೇಳಿದ್ದಾರೆ. ನ್ಯಾಯಯುತ ಮತ್ತು ಸುರಕ್ಷಿತ ಓಟವನ್ನು ಖಚಿತಪಡಿಸಿಕೊಳ್ಳಲು 100 ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಎಂದು ನಾಯಕ್ ಮಾಹಿತಿ ನೀಡಿದರು. ಸೈಕಲ್ ರ್ಯಾಲಿಗೆ ಚಾಲನೆ ನೀಡಿದಾಗ ಇತರ ಉನ್ನತ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.
ಇದನ್ನೂ ಓದಿ: ಹಾಕಿ ಇಂಡಿಯಾಗೆ ಡೇವಿಡ್ ಜಾನ್, ಬಿಜೆ ಕಾರಿಯಪ್ಪ, ಶಿವೇಂದ್ರ ಸಿಂಗ್ ತರಬೇತಿ