ಜಕಾರ್ತ್: ಹೀರೋ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್ 4 ಹಂತ ಇಂದಿನಿಂದ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಭಾರತ ಜಪಾನ್ ವಿರುದ್ಧ 2-1 ಅಂತರದ ಗೆಲುವು ದಾಖಲು ಮಾಡಿದೆ. ಈ ಮೂಲಕ ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಲೀಗ್ ಹಂತದಲ್ಲಿ ಜಪಾನ್ ವಿರುದ್ಧ ಭಾರತ 2-5 ಅಂತರದಿಂದ ಸೋಲು ಕಂಡಿತ್ತು. ಇದರ ಜೊತೆಗೆ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಾಗಿತ್ತು. ಆದರೆ, ಇಂಡೋನೇಷ್ಯಾ ವಿರುದ್ಧದ ಗುಂಪು ಹಂತದ ಕೊನೆ ಪಂದ್ಯದ ಭರ್ಜರಿ ಗೆಲುವು(16-0) ದಾಖಲಿಸಿ, ಸೂಪರ್ 4 ಹಂತಕ್ಕೆ ಲಗ್ಗೆ ಹಾಕಿತ್ತು.
ಇಂದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ಎದುರಾಳಿ ಜಪಾನ್ ತಂಡಕ್ಕೆ ಸೋಲಿನ ರುಚಿ ತೋರಿಸಿತು. ಭಾರತದ ಪರ ಮಂಜೀತ್ ಸಿಂಗ್ ಗೋಲು ಗಳಿಸಿ ಶುಭಾರಂಭ ಮಾಡಿದರೆ, ತದನಂತರ ಮೂರನೇ ಕ್ವಾರ್ಟರ್ ವೇಳೆ ಪವನ್ ಮತ್ತೊಂದು ಗೋಲು ಹೊಡೆದು, ತಂಡ ಮೆಲುಗೈ ಸಾಧಿಸುವಂತೆ ಮಾಡಿದರು. ಜಪಾನ್ ಪರ ಒಂದು ಗೋಲ್ ಮಾತ್ರ ದಾಖಲಾಯಿತು. ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ನಡುವಿನ ಪಂದ್ಯ 2-2 ಅಂತರದಲ್ಲಿ ಡ್ರಾ ಆಗಿದೆ.
ಇದನ್ನೂ ಓದಿ: ಏಷ್ಯಾ ಕಪ್ ಹಾಕಿ:ಇಂಡೋನೇಷ್ಯಾ ವಿರುದ್ಧ ಗೆದ್ದು ನಾಕೌಟ್ ಅರ್ಹತೆ ಪಡೆದ ಭಾರತ, ಟೂರ್ನಿಯಿಂದ ಪಾಕ್ ಔಟ್
ವಿಶೇಷ ಎಂದರೆ ಎ ಗುಂಪಿನ ಎಲ್ಲ 3 ಪಂದ್ಯಗಳಲ್ಲಿ ಗೆದ್ದು ಸೂಪರ್ 4ರ ಹಂತಕ್ಕೆ ಜಪಾನ್ ಲಗ್ಗೆ ಹಾಕಿತ್ತು. ಇಲ್ಲಿ ಸೋಲು ಕಂಡಿದೆ. ಇನ್ನೂ ಲೀಗ್ ಹಂತದಲ್ಲಿ ಭಾರತ ಪಾಕ್ ವಿರುದ್ಧ 1-1 ಅಂತರದಲ್ಲಿ ಡ್ರಾ ಸಾಧಿಸಿದರೆ, ಜಪಾನ್ ವಿರುದ್ಧ 2-5 ಅಂತರದಿಂದ ಸೋಲು ಕಂಡಿತ್ತು. ಆದರೆ, ಇಂಡೋನೇಷ್ಯಾ ವಿರುದ್ಧ 16-0 ಅಂತರದಿಂದ ಗೆಲುವು ಸಾಧಿಸಿತ್ತು. ಇನ್ನು ಸೂಪರ್ 4ರಲ್ಲಿ ಭಾರತ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಮಲೇಷ್ಯಾ ಕಣದಲ್ಲಿದ್ದು. ಟಾಪ್ 2 ತಂಡಗಳು ಫೈನಲ್ನಲ್ಲಿ ಸೆಣಸಾಟ ನಡೆಸಲಿವೆ. ಭಾರತ ಮುಂದಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಹಾಗೂ ಮಲೇಷ್ಯಾ ವಿರುದ್ಧ ಸೆಣಸಾಟ ನಡೆಸಲಿದೆ.