ಲುಸೈಲ್(ಕತಾರ್): ಮೊದಲ ಕ್ವಾರ್ಟರ್ಫೈನಲ್ ಪಂದ್ಯದ ಪೆನಾಲ್ಟಿ ಶೂಟೌಟ್ನಲ್ಲಿ ಬಲಾಢ್ಯ ಬ್ರೆಜಿಲ್ ತಂಡವನ್ನು ಸೋಲಿಸಿ ರನ್ನರ್ ಅಪ್ ಕ್ರೊಯೇಷಿಯಾ ಸೆಮೀಸ್ಗೆ ತಲುಪಿದರೆ, ಎರಡನೇ ಕ್ವಾರ್ಟರ್ನಲ್ಲಿ ಶೂಟೌಟ್ನಲ್ಲಿ ಡಚ್ಚರನ್ನು 4-3 ಗೋಲುಗಳಿಂದ ಸದೆಬಡಿದ ವಿಶ್ವಶ್ರೇಷ್ಠ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ಎರಡನೇ ತಂಡವಾಗಿ ಸೆಮಿಫೈನಲ್ಗೆ ಎಂಟ್ರಿ ನೀಡಿತು.
ನಿಗದಿತ 90 ನಿಮಿಷದಲ್ಲಿ 2-2 ಗೋಲುಗಳಿಂದ ಪಂಡ್ಯ ಡ್ರಾ ಆಯಿತು. ಫಲಿತಾಂಶಕ್ಕಾಗಿ ಹೆಚ್ಚುವರಿ 30 ನಿಮಿಷಗಳ ಆಟದಲ್ಲೂ ಯಾವುದೇ ತಂಡ ಗೋಲು ಗಳಿಸಲಿಲ್ಲ. ಇದರಿಂದ ಪೆನಾಲ್ಟಿ ಶೂಟೌಟ್ ನಡೆಸಲಾಯಿತು. ಪ್ರಾಬಲ್ಯ ಮೆರೆದ ಅರ್ಜೆಂಟೀನಾ ನೆದರ್ಲ್ಯಾಂಡ್ಸ್ ವಿರುದ್ಧ ಜಯ ಸಾಧಿಸಿತು.
5ನೇ ಮತ್ತು ಕೊನೆಯ ವಿಶ್ವಕಪ್ ಆಡುತ್ತಿರುವ ಲಿಯೋನೆಲ್ ಮೆಸ್ಸಿ ತಮ್ಮ ಕಾಲ್ಚಳಕದಿಂದ 35 ನೇ ನಿಮಿಷದಲ್ಲಿ ಡಚ್ಚರ ಕಣ್ತಪ್ಪಿಸಿ ಚೆಂಡನ್ನು ನಹುಯೆಲ್ ಮೊಲಿನಾಗೆ ಪಾಸ್ ನೀಡಿದರು. ಸಿಕ್ಕ ಅವಕಾಶವನ್ನು ಕ್ಷಣದಲ್ಲೇ ಬಳಸಿಕೊಂಡ ಮೊಲಿನಾ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ನೀಡಿದರು. ಬಳಿಕ ಹಲವು ಪ್ರಯತ್ನಗಳ ಹೊರತಾಗಿಯೂ ಪ್ರಥಮಾರ್ಧದಲ್ಲಿ ನೆದರ್ಲ್ಯಾಂಡ್ಸ್ ಗೋಲು ಗಳಿಸಲಿಲ್ಲ.
ದ್ವಿತೀಯಾರ್ಧದ 71 ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಅವಕಾಶವನ್ನು ಗೋಲಾಗಿ ಮಾಡಿದ ಮೆಸ್ಸಿ ತಂಡಕ್ಕೆ 2-0 ಮುನ್ನಡೆಯ ಜೊತೆಗೆ ಈ ಸಲದ ವಿಶ್ವಕಪ್ನಲ್ಲಿ 4ನೇ ಗೋಲು ಬಾರಿಸಿದರು. ಅಲ್ಲದೇ ವಿಶ್ವಕಪ್ನ 10ನೇ ಗೋಲು ಬಾರಿಸಿ ದಿಗ್ಗಜ ಫುಟ್ಬಾಲಿಗ ಗೇಬ್ರಿಯಲ್ ಬಟಿಸ್ಟುವಾ ದಾಖಲೆಯನ್ನು ಸರಿಗಟ್ಟಿದರು.
83ನೇ ನಿಮಿಷದಲ್ಲಿ ನೆದರ್ಲೆಂಡ್ಸ್ ತಂಡದ ವೂಟ್ ವೆಘೋರ್ಸ್ಟ್ ಹೆಡ್ಡರ್ ಮೂಲಕ ಗೋಲು ಗಳಿಸಿ 2-1 ಅಂತರ ಕಡಿಮೆ ಮಾಡಿದರು. ಬಳಿಕ ಕೊನೆಯ ಕ್ಷಣದಲ್ಲಿ ಬರ್ಗ್ವಿಜ್ ಮತ್ತೊಂದು ಗೋಲು ಗಳಿಸಿ 2-2 ಸಮಬಲ ಸಾಧಿಸಿದರು. ಇದು ಅರ್ಜೆಂಟೀನಾಗೆ ಅರಗಿಸಿಕೊಳ್ಳಲು ಆಗಲಿಲ್ಲ. ಪಂದ್ಯ ಡ್ರಾ ಆದ ಕಾರಣ 30 ನಿಮಿಷ ಹೆಚ್ಚುವರಿ ಸಮಯದ ಆಟ ಆಡಿಸಲಾಯಿತು. ಆದರೆ, ಯಾವುದೇ ತಂಡ ಗೋಲು ಗಳಿಸದ ಕಾರಣ ಪಂದ್ಯವನ್ನು ಪೆನಾಲ್ಟಿ ಶೂಟೌಟ್ಗೆ ನೀಡಲಾಯಿತು.
ಪೆನಾಲ್ಟಿಯಲ್ಲಿ ಡಚ್ಚರ ಶೂಟೌಟ್: ಅರ್ಜೆಂಟೀನಾದ ಗೋಲ್ಕೀಪರ್ ಲೌಟಾರೊ ಮಾರ್ಟಿನೆಜ್ ಮೊದಲ ಗೋಲು ಗಳಿಸಲು ಬಂದ ನೆದರ್ಲ್ಯಾಂಡ್ಸ್ನ ವ್ಯಾನ್ ಡಿಜ್ಕ್ ಕಿಕ್ ಅನ್ನು ತಡೆದರು. ಬಳಿಕ ಲಿಯೋನೆಲ್ ಮೆಸ್ಸಿ ಡಚ್ಚರ ಗೋಲಿಯನ್ನು ತಪ್ಪಿಸಿ ಗೋಲು ಬಾರಿಸಿದರು. ಇದರಿಂದ 1-0 ಮುನ್ನಡೆ ದೊರಕಿತು. ಬಳಿಕ ಸ್ಟೀವನ್ ಬರ್ಗುಯಿಸ್ ಗೋಲನ್ನೂ ಮಾರ್ಟಿನೆಜ್ ತಡೆದರು. ಲಿಯಾಂಡ್ರೊ ಪರೆಡೆಸ್ ಗೋಲು ಗಳಿಸುವುದರೊಂದಿಗೆ ಅರ್ಜೆಂಟೀನಾ 2-0 ಮುನ್ನಡೆ ಸಾಧಿಸಿತು.
ಟೆನ್ ಕೂಪ್‌ಮೈನರ್ಸ್ ಡಚ್‌ನ ಮೂರನೇ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಗೊಂಜಾಲೊ ಮೊಂಟಿಯೆಲ್ ಅರ್ಜೆಂಟೀನಾ ಪರ ಮೂರನೇ ನೇರ ಗೋಲು ಗಳಿಸಿ 3-1 ಅಂತರ ನೀಡಿದರು. ವೆಘೋರ್ಸ್ಟ್ ಮತ್ತೊಂದು ಗೋಲು ಹೊಡೆದರು. ನೆದರ್ಲೆಂಡ್ಸ್ 2-3 ರಲ್ಲಿ ಸಾಗಿತು. ಎಂಝೊ ಫೆರ್ನಾಂಡಿಸ್ ಗೋಲು ಗಳಿಸುವಲ್ಲಿ ಎಡವಿದರು.
ಈ ವೇಳೆ ಎರಡೂ ತಂಡಗಳಿಗೆ ಕೊನೆಯ ಒಂದು ಪೆನಾಲ್ಟಿ ಬಾಕಿ ಇತ್ತು. ಡಚ್‌ನ ಡಿ ಜೊಂಗ್ ಅದ್ಭುತ ಗೋಲು ಗಳಿಸಿ 3-3 ರಲ್ಲಿ ಸಮಬಲ ಮಾಡಿದರು. ಗೆಲುವಿನ ನಿರ್ಣಾಯಕ ಕಿಕ್ ಅನ್ನು ಅರ್ಜೆಂಟೀನಾ ಗಳಿಸುವ ಮೂಲಕ 4-3 ರಲ್ಲಿ ಗೆದ್ದು ಸೆಮೀಸ್ಗೆ ತಲುಪುವ ಮೂಲಕ ಸಂಭ್ರಮಿಸಿದರು.
ಓದಿ: ಬ್ರೆಜಿಲ್ ಮಣಿಸಿ ಸೆಮೀಸ್ಗೇರಿದ ಕ್ರೊವೇಷಿಯಾ.. ಶೂಟೌಟ್ನಲ್ಲಿ 4-2 ಗೋಲುಗಳಿಂದ ಜಯ