ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಿದೆ.
ಈ ಹಿನ್ನೆಲೆಯಲ್ಲಿ ಚಿನಗದಿಲಿಯಲ್ಲಿ ಸರ್ವೇ ನಂ. 72/11, 83/5 ಮತ್ತು 83/6 ರಲ್ಲಿ ಪ್ರಾಣಿ ಸಾಕಣೆ ಇಲಾಖೆಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಎರಡು ಎಕರೆಗಳನ್ನು ಕ್ರೀಡಾ ಮತ್ತು ಯುವ ವ್ಯವಹಾರ ಇಲಾಖೆಗೆ ವರ್ಗಾಯಿಸಲು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ವಿ. ಉಶಾರಾಣಿ ಗುರುವಾರ ಆದೇಶ ಹೊರಡಿಸಿದ್ದಾರೆ.
ಪಿ.ವಿ ಸಿಂಧು ಬ್ಯಾಡ್ಮಿಂಟನ್ ಅಕಾಡೆಮಿಗೆ ಕ್ರೀಡಾ ಮತ್ತು ಯುವ ವ್ಯವಹಾರ ಇಲಾಖೆ ಎರಡು ಎಕರೆ ಜಾಗ ನೀಡಿದೆ. ಅಕಾಡೆಮಿ ನೋಂದಣಿ ಪ್ರಮಾಣಪತ್ರ ಮತ್ತು ಐಟಿ ರಿಟರ್ನ್ಸ್ ಅನ್ನು ಮೂರು ವರ್ಷಗಳ ಅವಧಿಗೆ ಸಲ್ಲಿಸಿದ ನಂತರ ಮತ್ತು ನಿಯಮಗಳ ಪ್ರಕಾರವೇ ಭೂಮಿಯನ್ನು ಪಿ.ವಿ ಸಿಂಧು ಬ್ಯಾಡ್ಮಿಂಟನ್ ಅಕಾಡೆಮಿಗೆ ವರ್ಗಾಯಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಸಿಎಂ ಜಗನ್ಮೋಹನ್ಗೆ ಸಿಂಧು ಧನ್ಯವಾದ:
“ಅಕಾಡೆಮಿ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಿದ್ದಕ್ಕಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಧನ್ಯವಾದಗಳು. ಆಂಧ್ರಪ್ರದೇಶದಲ್ಲಿ ಕ್ರೀಡಾಭಿವೃದ್ಧಿಗೆ ಸಿಎಂ ನಿರ್ಧರಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ಯಾವುದೇ ಬ್ಯಾಡ್ಮಿಂಟನ್ ಅಕಾಡೆಮಿ ಇಲ್ಲ, ಆದ್ದರಿಂದ ಅಲ್ಲಿ ಉನ್ನತ ಮಟ್ಟದ ಮೂಲಸೌಕರ್ಯಗಳನ್ನು ಹೊಂದಿರುವ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಲಾಯಿತು. ನಾವು ಮೊದಲ ಹಂತದಲ್ಲಿ ಅಕಾಡೆಮಿಯನ್ನು ನಿರ್ಮಿಸುತ್ತೇವೆ. ಮುಂದಿನ ಹಂತದಲ್ಲಿ ಕ್ರೀಡಾ ಶಾಲೆ ಸ್ಥಾಪಿಸುವ ಪ್ರಸ್ತಾಪವಿದೆ. ನಾನು ಇನ್ನೂ ಆಡುತ್ತಿದ್ದೇನೆ. ಆಟದಿಂದ ನಿವೃತ್ತಿಯಾದ ನಂತರ ಅಕಾಡೆಮಿಯಲ್ಲಿ ತರಬೇತಿ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಸರ್ಕಾರ ಕೋರಿರುವ ಎಲ್ಲ ವಿವರಗಳನ್ನು ಶೀಘ್ರದಲ್ಲೇ ನೀಡುತ್ತೇವೆ ಎಂದು ಪಿ.ವಿ ಸಿಂಧು ಹೇಳಿದರು.