ಹೈದರಾಬಾದ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಗುಂಗಿನಿಂದ ಹೊರ ಬಂದಿರುವ ಭಾರತೀಯ ಕ್ರೀಡಾಭಿಮಾನಿಗಳನ್ನು, ಇಂದಿನಿಂದ ಕಬಡ್ಡಿ ಜ್ವರ ಆವರಿಸಲಿವೆ. ಮುತ್ತಿನ ನಗರಿಯಲ್ಲಿ 7ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿ ಶುಭಾರಂಭಗೊಳ್ಳಲಿದ್ದು, 12 ವಾರಗಳ ಮದಗಜಗಳ ಕಾದಾಟ ನಡೆಯಲಿದೆ.
ಆರು ಸೀಸನ್ಗಳ ಯಶಸ್ಸಿನ ನಂತರ ಬಹು ನಿರೀಕ್ಷಿತ ಪ್ರೋ ಕಬಡ್ಡಿ 7ನೇ ಸೀಸನ್ ಇಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತು ಯು ಮುಂಬಾ ತಂಡಗಳು ಕಾದಾಡಲಿವೆ. ಇಂದು ಪ್ರಾರಂಭವಾಗುವ ಈ ಟೂರ್ನಿ ಅಕ್ಟೋಬರ್ 19ಕ್ಕೆ ಮುಕ್ತಾಯಗೊಳ್ಳಲಿದೆ.
ಕಳೆದ ಸೀಸನ್ನಲ್ಲಿ ಯು ಮುಂಬಾ ತಂಡವನ್ನು ಪ್ರತಿನಿಧಿಸಿದ್ದ ಸಿದ್ಧಾರ್ಥ್ ದೇಸಾಯಿ 200 ಅಂಕ ಗಳಿಸಿದ್ದರು. ತಾವು ಆಡಿದ ಮೊದಲ ಸೀಸನ್ನಲ್ಲಿಯೇ ಅದ್ಬುತ ಪ್ರದರ್ಶನ ತೋರಿದ್ದ ಸಿದ್ಧಾರ್ಥ್ ದೇಸಾಯಿ ಈ ಬಾರಿ ತೆಲುಗು ಟೈಟಾನ್ಸ್ ತಂಡ ಸೇರಿಕೊಂಡಿದ್ದಾರೆ. ಸಿದ್ದಾರ್ಥ್ ಮೊದಲ ಪಂದ್ಯದಲ್ಲಿ ಮಾಜಿ ತಂಡದ ವಿರುದ್ಧ ಆಡಲಿದ್ದು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
![Kabaddi](https://etvbharatimages.akamaized.net/etvbharat/prod-images/3892264_sports.jpg)
ಮೊದಲ ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ ಪಟ್ನಾ ಪೈರೇಟ್ಸ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಸ್ಟಾರ್ ಪ್ಲೇಯರ್ಗಳಿಂದ ಕೂಡಿದ್ದು, ಕಳೆದ ಸೀಸನ್ನಲ್ಲಿ ಮಿಂಚಿದ್ದ ಬೆಂಗಳೂರು ತಂಡದ ಪವನ್ ಶೆಹ್ರಾವತ್ ಮತ್ತು ಪಟ್ನಾ ತಂಡದ ಪ್ರದೀಪ್ ನರ್ವಾಲ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.
ಈ ಸೀಸನ್ನಲ್ಲಿ ಒಟ್ಟು 12 ತಂಡಗಳಿದ್ದು, ಒಂದು ತಂಡ ಪ್ರತಿಯೊಂದು ತಂಡವನ್ನೂ ಎರಡು ಬಾರಿ ಎದುರಿಸಲಿವೆ. ಅಂತಿಮವಾಗಿ ಪಾಯಿಂಟ್ ಪಟ್ಟಿಯಲ್ಲಿರುವ 6 ಅಗ್ರ ತಂಡಗಳು ಪ್ಲೇ ಆಫ್ ಸುತ್ತಿಗೆ ಆಯ್ಕೆಯಾಗಲಿವೆ.
ಕಳೆದ ಸೀಸನ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅಜಯ್ ಠಾಕೂರ್, ರಾಹುಲ್ ಚೌಧರಿ, ಪ್ರದೀಪ್ ನರ್ವಾಲ್, ಸಿದ್ದಾರ್ಥ್ ದೇಸಾಯಿ ಮತ್ತು ಪವನ್ ಶೆಹ್ರಾವತ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.