ಬೆಂಗಳೂರು: ಸೋಮವಾರ ಕೊರೊನಾ ಸೋಂಕಿಗೆ ತುತ್ತಾಗಿದ್ದ ಭಾರತ ಹಾಕಿ ತಂಡದ ಆಟಗಾರ ಮನ್‌ದೀಪ್ ಸಿಂಗ್ ಅವರನ್ನು ಇಂದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರದ ವರದಿ ಪ್ರಕಾರ, ಮನ್‌ದೀಪ್ ಸಿಂಗ್ ಅವರಿಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ಅವರ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಇವರಿಗೂ ಮೊದಲೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಭಾರತ ತಂಡದ ನಾಯಕ ಮನ್ಪ್ರೀತ್ ಸಿಂಗ್, ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ವರುಣ್ ಕುಮಾರ್ ಮತ್ತು ಗೋಲ್ ಕೀಪರ್ ಕ್ರಿಶನ್ ಬಹದ್ದೂರ್ ಪಠಕ್ ಸದ್ಯ ಆರೋಗ್ಯವಾಗಿದ್ದಾರೆ.
ಬೆಂಗಳೂರಿನ ಎಸ್ಎಐನ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಹಾಕಿ ಆಟಗಾರರೆಲ್ಲ ಬೆಂಗಳೂರಿಗೆ ಬಂದಿದ್ದರು. ಆ ಬಳಿಕ ಆಟಗಾರರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು
ಪ್ರತಿ ಆಟಗಾರರನ್ನು ದಿನಕ್ಕೆ ನಾಲ್ಕು ಬಾರಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೋಮವಾರ ರಾತ್ರಿಯ ತಪಾಸಣೆ ವೇಳೆ ಮನ್‌ದೀಪ್ ಅವರ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ನಿಗದಿತ ಮಟ್ಟಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿದೆ. ಇದು ಅವರಲ್ಲಿ ಕೊರೊನಾದ ಲಕ್ಷಣ ತೀವ್ರವಾಗುತ್ತಿರುವ ಸೂಚನೆಯಾಗಿತ್ತು. ತಕ್ಷಣವೇ ಅವರನ್ನು ಎಸ್‌ಎಸ್ ಸ್ಪರ್ಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾಯ್(SAI) ತಿಳಿಸಿದೆ.