ಚಂಡೀಗಡ: ಭಾರತೀಯ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ಹಾಕಿ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಉತ್ತುಂಗಕ್ಕೆ ಕೊಂಡೊಯ್ದ ಆಟಗಾರರಲ್ಲಿ ಸರ್ದಾರ್ ಸಿಂಗ್ ಕೂಡ ಒಬ್ಬರು. ಅಷ್ಟೇ ಅಲ್ಲದೆ, ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಭಾರತೀಯ ತಂಡವನ್ನು ಪ್ರತಿನಿಧಿಸಿದ ಖ್ಯಾತಿ ಇವರದ್ದು.
ಅಂತಾರಾಷ್ಟ್ರೀಯ ಮಟ್ಟದ ಹಾಕಿ ಆಟದಲ್ಲಿ ತನ್ನ ಕೌಶಲ್ಯ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಹರಿಯಾಣದ ರಾನಿಯಾದಲ್ಲಿ ಜುಲೈ 15, 1986ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೇ ಹಾಕಿ ಆಡುತ್ತ ಬೆಳದ ಇವರಿಗೆ ಸಹೋದರ ದಿದರ್ ಸಿಂಗ್ ಮೊದಲ ಗುರು. ದಿದರ್ ಭಾರತೀಯ ಹಾಕಿ ತಂಡದಲ್ಲಿ ಆಟವಾಡಿದ ಅನುಭವ ಹೊಂದಿದ್ದಾರೆ.
2008ರಲ್ಲಿ ಸರ್ದಾರ್ ತನ್ನ 22ನೇ ವಯಸ್ಸಿನಲ್ಲಿ ಹೈದರಾಬಾದ್ ಸುಲ್ತಾನ್ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ನಾಯಕರಾಗಿ ಅಖಾಡಕ್ಕೆ ಇಳಿದಿದ್ದರು. ಈ ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ತಂಡದ ನಾಯಕರಾಗಿ ತಂಡವನ್ನು ಪ್ರತಿನಿಧಿಸಿದ್ದು, ನನ್ನ ವೃತ್ತಿಜೀವನದ ಅತ್ಯುತ್ತಮ ಸಮಯ ಎಂದು ಹೇಳಿದ್ದಾರೆ.
ಇನ್ನು 2006ರಲ್ಲಿ ಪಾಕಿಸ್ತಾನ ವಿರುದ್ಧದ ಹಿರಿಯರ ತಂಡದಲ್ಲಿ ಸರ್ದಾರ್ ಸಿಂಗ್ ಭಾರತ ತಂಡಕ್ಕೆ ಪ್ರವೇಶ ಪಡೆದರು. ಸುಮಾರು 350 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಖ್ಯಾತಿ ಸರ್ದಾರ್ ಅವರಿಗೆ ಸಲ್ಲುತ್ತದೆ. 2006 ರಿಂದ 2018ರವರೆಗೆ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದರು. 2016ರವರೆಗೆ ಹಾಕಿ ತಂಡದ ನಾಯಕರಾಗಿದ್ದ ಇವರಿಗೆ ಪದ್ಮಶ್ರೀ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ಇವರು 2018ರಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದಾರೆ.