ಡೋಂಗೇ(ದಕ್ಷಿಣ ಕೊರಿಯಾ): ಡ್ರ್ಯಾಗ್ ಫ್ಲಿಕರ್ ಗುರ್ಜೀತ್ ಕೌರ್ ಸಿಡಿಸಿದ 5 ಗೋಲುಗಳ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ 2021ರ ವುಮೆನ್ಸ್ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಥಾಯ್ಲೆಂಡ್ ವಿರುದ್ಧ 13-0 ಅಂತರದಲ್ಲಿ ಜಯ ಸಾಧಿಸಿದೆ.
ಪಂದ್ಯಾರಂಭದ ಕೇವಲ 2ನೇ ನಿಮಿಷದಲ್ಲಿ ಕೌರ್ ಮೊದಲ ಗೋಲುಗಳಿಸಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಟೋಕಿಯೋ ಒಲಿಂಪಿಕ್ಸ್ನಲ್ಲಿ 4 ಗೋಲು ಬಾರಿಸಿದ್ದ ಕೌರ್ ಆರಂಭದಲ್ಲೇ ಸಿಕ್ಕ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಫಲರಾದರು.
ನಂತರ ಒಲಿಂಪಿಕ್ಸ್ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಏಕೈಕ ಭಾರತೀಯಳಾಗಿರುವ ವಂದನಾ ಕಟಾರಿಯಾ 7ನೇ ನಿಮಿಷದಲ್ಲಿ ಮತ್ತೊಂದು ಗೋಲು ಸಿಡಿಸಿ ಮುನ್ನಡೆಯನ್ನು ಹೆಚ್ಚಿಸಿದರು.
ನಂತರ ಲಿಲಿಮಾ ಮಿಂಜ್ 14ನೇ ನಿಮಿಷದಲ್ಲಿ 3ನೇ ಗೋಲು, ಗುರ್ಜೀತ್ ಕೌರ್ 14 ನಿಮಿಷದಲ್ಲಿ 4ನೇ ಮತ್ತು ಜ್ಯೋತಿ 15ನೇ ನಿಮಿಷದಲ್ಲಿ 5ನೇ ಗೋಲು ಸಿಡಿಸಿ ಪಂದ್ಯದಲ್ಲಿ ಥಾಯ್ಲೆಂಡ್ ಆಟಗಾರ್ತಿಯರು ಹಿಂತಿರುಗಿ ಬರಲು ಅವಕಾಶವನ್ನೇ ನೀಡದೇ 5-0ಯಲ್ಲಿ ಮುನ್ನಡೆ ಒದಗಿಸಿಕೊಟ್ಟರು.
ಎರಡನೇ ನಿಮಿಷ ಅಂತರದಲ್ಲಿ ಪದಾರ್ಪಣೆ ಮಾಡಿದ್ದ ರಾಜ್ವಿಂದರ್ ಕೌರ್ 16ನೇ ಮತ್ತು 24ನೇ ನಿಮಿಷದಲ್ಲಿ 2 ಗೋಲು ಸಿಡಿಸಿದರು. ಗುರ್ಜೀತ್ 24 ಮತ್ತು 25ನೇ ನಿಮಿಷದಲ್ಲಿ ಎರಡೂ ಗೋಲು ಸಿಡಿಸಿ ಮಧ್ಯಂತರದ ವೇಳೆಗೆ ಮುನ್ನಡೆಯನ್ನು 9-0ಗೆ ಏರಿಸಿದರು.
10 ನಿಮಿಷಗಳ ಬ್ರೇಕ್ನ ನಂತರ ಥಾಯ್ಲೆಂಡ್ ಮೊದಲ 6 ನಿಮಿಷಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡಿತು. ಆದರೆ, 36ನೇ ನಿಮಿಷದಲ್ಲಿ ಜ್ಯೋತಿ ಥಾಯ್ ಮಹಿಳೆಯರ ರಕ್ಷಣಾ ಕೋಟೆಯನ್ನು ಬೇಧಿಸಿ ಗೋಲು ಸೇರಿಸಿದರು.
43ನೇ ನಿಮಿಷದಲ್ಲಿ ಮತ್ತು 58 ನೇ ನಿಮಿಷದಲ್ಲಿ ಗುರ್ಜೀತ್ ಕೌರ್ ಪೆನಾಲ್ಟಿ ಸ್ಟ್ರೋಕ್ ಮೂಲಕ ತಮ್ಮ 5ನೇ ಗೋಲು ಸಿಡಿಸಿದರೆ, 55ನೇ ನಿಮಿಷದಲ್ಲಿ ಮೋನಿಕಾ ಗೋಲು ಸಿಡಿಸಿ ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದರು.
ಭಾರತ ಮಹಿಳಾ ತಂಡ ಮುಂದಿನ ಪಂದ್ಯವನ್ನು ಡಿಸೆಂಬರ್ 8ರಂದು ದಕ್ಷಿಣ ಕೊರಿಯಾ ವಿರುದ್ಧ ಆಡಲಿದೆ.
ಇದನ್ನೂ ಓದಿ:BWF World Tour Finals : ಫೈನಲ್ನಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು