ಬಾರ್ಸಿಲೋನಾ : ಅರ್ಜೆಂಟೀನಾ ಲೆಜೆಂಡ್ ಲಿಯೋನಲ್ ಮೆಸ್ಸಿ ಹಿಂದಿನ ನಾಲ್ಕು ಆವೃತ್ತಿಗಳಿಂದ ಬಾರ್ಸಿಲೋನಾ ಕ್ಲಬ್ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದದ ದಾಖಲಾತಿ ಲೀಕ್ ಆಗಿದೆ. ಇದನ್ನು ಭಾನುವಾರ ಸ್ಪ್ಯಾನೀಸ್ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ.
ಈ ವರದಿಯ ಪ್ರಕಾರ ಮೆಸ್ಸಿ ಸ್ಪೇನ್ ಫುಟ್ಬಾಲ್ ಕ್ಲಬ್ ಜೊತೆಗೆ 4 ವರ್ಷಗಳ ಒಪ್ಪಂದವಾಗಿ 555 ಮಿಲಿಯನ್ ಯೋರೋಸ್(4911 ಕೋಟಿ ರೂ) ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ಮೆಸ್ಸಿ ಪ್ರತಿ ಆವೃತ್ತಿಯಲ್ಲೂ 138 ಮಿಲಿಯನ್ ಯೂರೋಸ್(167 ಮಿಲಿಯನ್ ಯುಎಸ್ಡಿ) ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇದು ಕ್ರೀಡಾ ಜಗತ್ತಿನಲ್ಲಿ ಕ್ರೀಡಾಪಟುವೊಬ್ಬನ ದುಬಾರಿ ಒಪ್ಪಂದವಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಫುಟ್ಬಾಲ್ ಜಗತ್ತಿನಲ್ಲಿ ಸರ್ವಶ್ರೇಷ್ಠ ಆಟಗಾರನಾಗಿರುವ ಮೆಸ್ಸಿ 2017ರಲ್ಲಿ ಕ್ಯಾಟಲನ್ ಕ್ಲಬ್ ಜೊತೆ 4 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರು. ಮೆಸ್ಸಿ ತಾವು ಗಳಿಸಿದ ಆದಾಯದ ಅರ್ಧದಷ್ಟನ್ನು ಸ್ಪೇನ್ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿಸಿದ್ದಾರೆಂದು ತಿಳಿದು ಬಂದಿದೆ.
ಇನ್ನು, 33 ವರ್ಷದ ಆಟಗಾರ ಈಗಾಗಲೇ ಒಪ್ಪಂದ 555 ಮಿಲಿಯನ್ ಯುರೋಸ್ಗಳಲ್ಲಿ 510 ಮಿಲಿಯನ್ ಯುರೋಸ್ಗಳನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಇನ್ನು, ಈ ಅವಧಿಯಲ್ಲಿ ಮೆಸ್ಸಿ ಕ್ಲಬ್ಗೆ 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ಕೊಡುವ ಮೂಲಕ ಗೌರವ ತಂದು ಕೊಟ್ಟಿದ್ದಾರೆ ಎಂಬುದನ್ನು ಸಹ ಪತ್ರಿಕೆ ವರದಿ ಮಾಡಿದೆ.