ನವದೆಹಲಿ: ಭಾರತದ ಫುಟ್ಬಾಲ್ ಮಾಂತ್ರಿಕ, ಕಾಲ್ಚೆಂಡಿನ ಚತುರ ಎಂದು ಕರೆಯಿಸಿಕೊಳ್ಳುವ ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನಿಲ್ ಚೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಇಂದಿಗೆ 15 ವರ್ಷ ಪೂರೈಸಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿರುವ ಇವರು, ಭಾರತೀಯ ಫುಟ್ಬಾಲ್ಗೆ ಹೊಸ ರೂಪ ನೀಡಿದವರು.

2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಪದಾರ್ಪಣೆ
1989ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದ ಇವರು ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದಾರೆ. 35 ವರ್ಷದ ಸುನಿಲ್ ಚೆಟ್ರಿ 2005ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದು, ಇಂದಿಗೆ 15 ವರ್ಷ ಮುಕ್ತಾಯಗೊಂಡಿವೆ.

2008ರಲ್ಲಿ ಎಎಫ್‌ಸಿ ಚಾಲೆಂಜ್ ಕಪ್, 2011ರ ಎಎಫ್‌ಸಿ ಏಷ್ಯಾಕಪ್ ಹಾಗೂ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಇವರು, 2013ರಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಸೇರಿಕೊಳ್ಳುತ್ತಾರೆ. ಮುಂದಿನ ಮೂರ್ನಾಲ್ಕು ವರ್ಷ ದೇಶದ ಪರ ಆಡುವ ಭಯಕೆ ವ್ಯಕ್ತಪಡಿಸಿರುವ ಅವರು ಹೆಚ್ಚಿನ ಸಾಧನೆ ಮಾಡುವ ಆಸೆ ಇಟ್ಟುಕೊಂಡಿದ್ದಾರೆ.

ಮೆಸ್ಸಿ ದಾಖಲೆ ಮುರಿದಿರುವ ಚೆಟ್ರಿ
ಫುಟ್ಬಾಲ್ ಲೋಕದ ದಂತಕಥೆ ಲಿಯೊನೆಲ್ ಮೆಸ್ಸಿ ಅವರ ನಿರ್ಮಿಸಿದ್ದ ಅತಿ ಹೆಚ್ಚು ಗೋಲು ದಾಖಲೆ ಮುರಿದಿರುವ ಚೆಟ್ರಿ ಅತಿ ಹೆಚ್ಚು ಗೋಲು ಗಳಿಸಿರುವ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.2017ರಲ್ಲಿ ಬಹುಕಾಲದ ಪತ್ನಿ ಸೋಮನ್ ಭಟ್ಟಚಾರ್ಯ ಜೊತೆ ಕೋಲ್ಕತ್ತಾದಲ್ಲಿ ದಾಂಪತ್ಯ ಜೀವನಕ್ಕೆ ಇವರು ಕಾಲಿಟ್ಟಿದ್ದಾರೆ.

ಭಾರತದ ಪರ ಅತ್ಯಧಿಕ ಗೋಲು ಗಳಿಸಿರುವ ಇವರು, ಅದ್ಭುತ ಆಟಗಾರನಾಗಿದ್ದು, ಇದರ ಜತೆಗೆ ನಾಯಕತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಮತ್ತು ಬಿಎಫ್‌ಸಿ ತಂಡವನ್ನು ಯಶಸ್ಸಿಯಾಗಿ ನಡೆಸಿಕೊಂಡು ಹೋಗುತ್ತಿದ್ದು, ಕಾಲ್ಚಳಕದ ಮೂಲಕ ಎದುರಾಳಿ ತಂಡದಲ್ಲಿ ಭಯ ಹುಟ್ಟಿಸಿದ್ದಾರೆ.

2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ
2002ರಲ್ಲಿ ಮೋಹನ್ ಬಾಗನ್ ಕ್ಲಬ್ ಪರ ಆಡುವ ಮೂಲಕ ಫುಟ್ಬಾಲ್ ಪ್ರಪಂಚಕ್ಕೆ ಪರಿಚಯವಾದ ಇವರು, 2007, 2009 ಮತ್ತು 2012ರ ನೆಹರೂ ಕಪ್ ಟೂರ್ನಿಗಳಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಎಎಫ್‌ಸಿ ಚಾಲೆಂಜ್ ಕಪ್ನಲ್ಲಿ ಅಮೋಘ ಆಟ ಆಡಿದ್ದ ಚೆಟ್ರಿ ಭಾರತ ತಂಡ ಪ್ರಶಸ್ತಿ ಜಯಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.ಇವರ ಅದ್ಭುತ ಆಟಕ್ಕಾಗಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.