ಟೋಕಿಯೋ: 2020ರ ಒಲಿಂಪಿಕ್ಸ್ಗೆ ಕೇವಲ 5 ತಿಂಗಳಿರುವಾಗ ಜಪಾನ್ ಕೊರೊನ ವೈರಸ್ಗೆ ಹೆದರಿ ತನ್ನ ಜೆ-ಫುಟ್ಬಾಲ್ ಲೀಗ್ಗಗಳನ್ನ ತಾತ್ಕಾಲಿಕವಾಗಿ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಚೀನಾ ಸೇರಿದಂತೆ ವಿಶ್ವಾದ್ಯಂತ ಭಯ ಹುಟ್ಟಿಸಿರುವ ಕೊರೊನ ವೈರಸ್ ಭೀತಿಯಿಂದ ಜಪಾನ್ ಕೂಡ ತನ್ನ ಪುಟ್ಬಾಲ್ ಲೀಗ್ ಅನ್ನು ಮುಂದೂಡಿದೆ. ಚೀನಾ, ಕೊರಿಯಾ ದೇಶಗಳು ಸಹಾ ತಮ್ಮ ಫುಟ್ಬಾಲ್ ಲೀಗ್ಗಳನ್ನು ನಡೆಸದಿರಲು ತೀರ್ಮಾನ ಕೈಗೊಂಡಿವೆ.
ಜೆ-ಲೀಗ್ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ಲೀಗ್ ಮುಂದೂಡುವ ಮಹತ್ವದ ನಿರ್ಧಾರನ್ನು ತೆಗೆದುಕೊಳ್ಳಲಾಗಿದೆ ಎಂದು ಲೀಗ್ ಅಧ್ಯಕ್ಷ ಮಿತ್ಸುರು ಮುರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
" ನಾಳೆ ನಿಗದಿಯಾಗಿದ್ದ ಲೆವೈನ್ ಕಪ್ ಪಂದ್ಯಗಳನ್ನು ಹಾಗೂ ಮಾರ್ಚ್ 15 ರವರೆಗೆ ನಿಗದಿಯಾಗಿದ್ದ ಎಲ್ಲಾ ಅಧಿಕೃತ ಆಟಗಳನ್ನು ಮುಂದೂಡಲು ನಾವು ನಿರ್ಧರಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಸೋಮವಾರವಷ್ಟೇ ಮುಂಬರುವ ದಿನಗಳಲ್ಲಿ ವೈರಸ್ ಹರಡುವಿಕೆಯನ್ನು ತಡೆಯುವುದು ತುಂಬಾ ನಿರ್ಣಾಯಕವಾಗಲಿದೆ ಎಂದು ಜಪಾನ್ ಸರ್ಕಾರಕ್ಕೆ ಅಲ್ಲಿನ ವೈದ್ಯಕೀಯ ಸಮಿತಿ ಸಲಹೆ ನೀಡಿದೆ. ಈಗಾಗಲೆ ಜಪಾನ್ನಲ್ಲಿ 156 ಜನರಲ್ಲಿ ವೈರಸ್ ಹರಡಿರುವುದು ಖಚಿತವಾಗಿದೆ. ಜೊತೆಗೆ ಸುಮಾರು 700 ಮಂದಿ ಎರಡು ವಾರಗಳ ಕಾಲ ಕ್ರೂಸ್ ಹಡಗಿನಲ್ಲಿ ದೇಶದಿಂದ ಹೊರಗುಳಿದಿದ್ದರು. ಈ ಸಂದರ್ಭದಲ್ಲಿ ಹಡಗಿನಲ್ಲಿ ಆನಾರೋಗ್ಯದಿಂದ ನಾಲ್ವರು ಮೃತಪಟ್ಟಿದ್ದರು. ಇದರಿಂದಲೇ ಕೊರೊನ ವೈರಸ್ ಬಗ್ಗೆ ಜಾಗೃತರಾಗಲು ಜಪಾನ್ ಸರ್ಕಾರಕ್ಕೆ ವರದಿ ನೀಡಲಾಗಿದೆ.
ಒಲಿಂಪಿಕ್ಸ್ನ ವೇಳಾಪಟ್ಟಿಯ ಬದಲಾವಣೆಯಿಲ್ಲ
ಇನ್ನು ವೈರಸ್ ನಿಂದ ಒಲಿಂಪಿಕ್ಸ್ ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆ ಆಗಲಿದೆಯೇ ಎಂಬುದಕ್ಕೆ ಉತ್ತರಿಸಿರುವ ಟೋಕಿಯೋ ಗವರ್ನರ್ ಯುರಿಕೊ ಕೊಯಿಕೆ , ನಾವು ಇನ್ನು ಆ ಪರಿಸ್ಥಿತಿಗೆ ತಲುಪಿಲ್ಲ ಎಂದು ತಿಳಿಸಿದ್ದಾರೆ.