ನವದೆಹಲಿ: ಗುರುವಾರ ಫಿಫಾ ರ‍್ಯಾಂಕಿಂಗ್ ಬಿಡುಗಡೆಯಾಗಿದ್ದು ಭಾರತ ತಂಡ ಎರಡು ಸ್ಥಾನಗಳ ಏರಿಕೆಯಾಗಿ 101 ಸ್ಥಾನಕ್ಕೆ ಬಡ್ತಿ ಪಡೆದಿದೆ.
ಸುನಿಲ್ ಛೆಟ್ರಿ ನಾಯಕತ್ವದ ಭಾರತ ತಂಡ ಜನವರಿಯ ಬಳಿಕ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಪ್ರಸ್ತುತ ಭಾರತ 1,219 ಅಂಕಗಳೊಂದಿಗೆ ಏಷ್ಯನ್ ದೇಶಗಳಲ್ಲಿ 18 ಸ್ಥಾನ ಪಡೆದಿದೆ.
ಏಷ್ಯನ್ ಕಪ್ನಲ್ಲಿ ಭಾರತ ಥಾಯ್ಲೆಂಡ್ ತಂಡವನ್ನು 4-1ರಿಂದ ಮಣಿಸಿ ಉತ್ತಮ ಆರಂಭ ಪಡೆದಿತ್ತು. ಆ ಬಳಿಕ ಯುಎಇ ಹಾಗೂ ಬಹರೈನ್ ವಿರುದ್ಧ ಸೋತು ನಿರಾಸೆ ಅನುಭವಿಸಿತು.
ಏಷ್ಯನ್ ಕಪ್ನ ನೀರಸ ಪ್ರದರ್ಶನದ ಹಿನ್ನೆಲೆ ಕೋಚ್ ಸ್ಟೀಫನ್ ಕಾನ್ಸ್ಟಂಟೈನ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸದ್ಯ ಭಾರತ ಫುಟ್ಬಾಲ್ ತಂಡಕ್ಕೆ ಕೋಚ್ ಹೊಂದಿಲ್ಲ.
ಬೆಲ್ಜಿಯಂಗೆ ಅಗ್ರಪಟ್ಟ:
ಬೆಲ್ಜಿಯಂ ತಂಡ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ವಿಶ್ವಕಪ್ ವಿಜೇತ ಫ್ರಾನ್ಸ್ ಹಾಗೂ ಬ್ರೆಜಿಲ್ ತಂಡಗಳು ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.