ನವದೆಹಲಿ: ಭಾರತದ ಮಹಿಳಾ ಫುಟ್ಬಾಲ್ ತಂಡದ ನಾಯಕಿ ಬಾಲಾ ದೇವಿ ಭಾರತದ ಪ್ರಥಮ ಫುಟ್ಬಾಲ್ ಆಟಗಾರ್ತಿಯಾಗಿ ಭಾನುವಾರ ವಿದೇಶಿ ಲೀಗ್ನಲ್ಲಿ ಪದಾರ್ಪಣೆ ಮಾಡಲಿದ್ದು, ತಮ್ಮ ಮೇಲಿನ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ತೋರಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ.
2020ರ ಜನವರಿಯಲ್ಲಿ ಸ್ಕಾಟ್ಲೆಂಡ್ನ ರೇಂಜರ್ಸ್ ಫುಟ್ಬಾಲ್ ಕ್ಲಬ್ನೊಂದಿಗೆ 18 ತಿಂಗಳ ಒಪ್ಪಂದಕ್ಕೆ ಸಹಿ ಹಾಕಿರುವ ಬಾಲಾ, ಆರು ವಾರಗಳ ತರಬೇತಿಯ ನಂತರ ಲೀಗ್‌ಗೆ ಭಾನುವಾರ ಪದಾರ್ಪಣೆ ಮಾಡಲಿದ್ದಾರೆ.
2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಬಾಲಾ ದೇವಿ ಇಲ್ಲಿಯವರೆಗೆ 58 ಪಂದ್ಯಗಳಿಂದ 52 ಗೋಲುಗಳಿಸಿದ್ದಾರೆ. 15ನೇ ವಯಸ್ಸಿನಲ್ಲಿ ಫುಟ್ಬಾಲ್ ವೃತ್ತಿ ಬದುಕು ಆರಂಭಿಸಿದ್ದ ಅವರು ಸುಮಾರು 120 ದೇಶಿ ಪಂದ್ಯಗಳನ್ನಾಡಿ 100ಕ್ಕೂ ಹೆಚ್ಚು ಗೋಲು ಗಳಿಸಿದ್ದಾರೆ. ಇದೀಗ ವಿದೇಶಿ ಲೀಗ್ನಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಅವರು ಪುರುಷ ಆಟಗಾರರನ್ನು ಮೀರಿದ ಸಾಧನೆಗೆ ಪಾತ್ರರಾಗಲಿದ್ದಾರೆ.
" ನಾವು ಆರು ವಾರಗಳ ತರಬೇತಿ ಪಡೆದಿದ್ದೇವೆ. ಇಲ್ಲಿನ ವಿಚಾರಗಳು ಭಾರತದಲ್ಲಿ ನಾವು ಹೊಂದಿರುವುದಕ್ಕಿಂತ ತುಂಬಾ ವಿಭಿನ್ನವಾಗಿದೆ, ಸ್ಪಷ್ಟವಾಗಿ ಅಲ್ಲಿಗಿಂತ ಹೆಚ್ಚು ವೃತ್ತಿಪರ ವಿಷಯವಾಗಿದೆ" ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಗ್ಲ್ಯಾಸ್ಗೋದಿಂದ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇಲ್ಲಿನ ತರಬೇತಿ ಶೈಲಿಯನ್ನು ನಾನು ಇಷ್ಟಪಡುತ್ತೇನೆ. ನಮ್ಮ ಕೋಚ್ ತುಂಬಾ ಸ್ಪಷ್ಟವಾಗಿ ಸೂಚನೆಗಳನ್ನು ನೀಡುತ್ತಾರೆ. ಇಲ್ಲಿ ಕೆಲವು ತಿಂಗಳಿಂದ ನಾನು ತುಂಬಾ ಕಲಿತಿದದ್ದೇನೆ ಎಂದು ಅವರು ಹೇಳಿದ್ದಾರೆ.
"ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದೇನೆ. ಹಾಗಾಗಿ, ನಾನು ಈ ಲೀಗ್ನಲ್ಲಿ ಮುಂದೆ ಹೋಗಲು ಸಿದ್ಧಳಿದ್ದೇನೆ " ಎಂದು ಯುರೋಪ್ನ ಅತ್ಯುನ್ನತ ಫುಟ್ಬಾಲ್ ಕ್ಲಬ್ನಲ್ಲಿ ಆಡುತ್ತಿರುವ ಮೊದಲ ಭಾರತೀಯ ಫುಟ್ಬಾಲ್ ಪಟು ಎನಿಸಿಕೊಂಡಿರುವ 30 ವರ್ಷದ ಬಾಲಾ ದೇವಿ ತಿಳಿಸಿದ್ದಾರೆ.