ಬಾರ್ಸಿಲೋನಾ : ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ನಿಂದ ದೂರಸರಿಯಲು ಬಯಸಿದ್ದಾರೆ. ಈ ಬಗ್ಗೆ ಮೆಸ್ಸಿ ಬಾರ್ಸಿಲೋನಾ ಕ್ಲಬ್‌ಗೆ ತಮ್ಮ ಸಂದೇಶ ಕಳುಹಿಸಿದ್ದಾರೆ.
ಕ್ಲಬ್‌ಗೆ ಫ್ಯಾಕ್ಸ್ ಕಳುಹಿಸಿದ್ದು, ಕ್ಲಬ್ನಿಂದ ಹೊರಬರಲು ಅವಕಾಶ ನೀಡುವಂತೆ ಮೆಸ್ಸಿ ಮನವಿ ಮಾಡಿದ್ದಾರೆ. ಈ ಬೇಸಿಗೆಯ ಅವಧಿಯಲ್ಲಿ ಕ್ಲಬ್ನಿಂದ ವರ್ಗಾವಣೆ ಹೊಂದುವ ಅವಕಾಶವನ್ನು ಒಪ್ಪಂದದಲ್ಲಿನ ಷರತ್ತಿನಲ್ಲಿ ನೀಡುವಂತೆ ಕೋರಿದ್ದಾರೆ ಎಂದು ಗೋಲ್ ಡಾಟ್ ಕಾಮ್ ವರದಿ ಮಾಡಿದೆ.
ಮೆಸ್ಸಿ ತನ್ನ ಸಂಪೂರ್ಣ ವೃತ್ತಿಜೀವನವನ್ನು ಬಾರ್ಸಿಲೋನಾದೊಂದಿಗೆ ಕಳೆದಿದ್ದು, ಆರು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮೆಸ್ಸಿ ಬಾರ್ಸಿಲೋನಾ ಕ್ಲಬ್ನಿಂದ ಹೊರಬರುವ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು.
ಚಾಂಪಿಯನ್ಸ್ ಲೀಗ್ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಬೇಯರ್ನ್ ಮ್ಯೂನಿಚ್ ವಿರುದ್ಧ ಬಾರ್ಸಿಲೋನಾ 8-2 ಅಂತರದಿಂದ ಹೀನಾಯವಾಗಿ ಸೋಲುಂಡು ಭಾರಿ ಟೀಕೆಗೆ ಗುರಿಯಾಗಿತ್ತು. ಅಲ್ಲದೆ ಮುಖ್ಯ ತರಬೇತುದಾರ ಕ್ವಿಕ್ ಸೆಟಿಯನ್ ಮತ್ತು ತಾಂತ್ರಿಕ ವ್ಯವಸ್ಥಾಪಕ ಎರಿಕ್ ಅಬಿಡಾಲ್ ಈಗಾಗಲೇ ಕ್ಲಬ್ನಿಂದ ನಿರ್ಗಮಿಸಿದ್ದಾರೆ. ರೊನಾಲ್ಡ್ ಕೋಮನ್ ಅವರನ್ನು ಬಾರ್ಸಿಲೋನಾದ ಹೊಸ ತರಬೇತುದಾರರನ್ನಾಗಿ ನೇಮಿಸಲಾಗಿದೆ.
2019-20ರ ಫುಟ್ಭಾಲ್ ಅಭಿಯಾನವನ್ನು ಯಾವುದೇ ಟ್ರೋಫಿಗಳಿಲ್ಲದೆ ಮುಗಿಸಿದ್ದ ಬಾರ್ಸಿಲೋನಾ, 2019-20ರ ಕ್ರೀಡಾ ಋತುವಿನ ಲಾ ಲಿಗಾದಲ್ಲಿ ರಿಯಲ್ ಮ್ಯಾಡ್ರಿಡ್‌ನ ನಂತರದ ಅಂದರೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.