ರಿಯೋ ಡಿ ಜನೈರೋ(ಬೆಜಿಲ್): ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು 1-0ಯಿಂದ ಮಣಿಸಿ ಕೋಪಾ ಅಮೆರಿಕಾ ಟ್ರೋಫಿ ಎತ್ತಿ ಹಿಡಿದಿದೆ. 1993ರ ನಂತರ ಅರ್ಜೆಂಟೀನಾ ಗೆದ್ದ ಪ್ರಮುಖ ಟ್ರೋಫಿ ಇದಾಗಿದೆ.
ಭಾನುವಾರ ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದು ಬೀಗಿದೆ. 22ನೇ ನಿಮಿಷದಲ್ಲಿ ಏಂಜಲ್ ಡಿ ಮರಿಯಾ ಗೋಲು ಬಾರಿಸುವ ಮೂಲಕ ಅರ್ಜಿಂಟೀನಾದ 28 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿದರು.
ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಶ್ರೇಷ್ಠ ಆಟಗಾರ ಎಂದೇ ಕರೆಯಲ್ಪಡುವ ಲಿಯೋನಲ್ ಮೆಸ್ಸಿ ವೃತ್ತಿ ಜೀವನದಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಒಂದೇ ಒಂದು ಪ್ರತಿಷ್ಠಿತ ಪ್ರಶಸ್ತಿ ಗೆದ್ದಿಲ್ಲ ಎನ್ನುವ ಅಪವಾದವಿತ್ತು. ಆದರೆ ಆ ಕೊರಗು ಇಂದು ಕೋಪಾ ಅಮೇರಿಕಾ ಕಪ್ ಗೆಲ್ಲುವ ಮೂಲಕ ಅಂತ್ಯಗೊಂಡಿದೆ.
ಅರ್ಜೆಂಟೀನಾ 1993ರಲ್ಲಿ ಮೆಕ್ಸಿಕೊ ತಂಡವನ್ನು ಮಣಿಸಿ ಕೊನೆಯ ಬಾರಿ ಕೋಪಾ ಅಮೆರಿಕಾ ಪ್ರಶಸ್ತಿ ಜಯಿಸಿತ್ತು. ನಂತರ 4 ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲಲು ವಿಫಲವಾಗಿವಾಗಿತ್ತು. 2004 ಮತ್ತು 2007ರಲ್ಲಿ ಬ್ರೆಜಿಲ್ ವಿರುದ್ಧ ಸೋತರೆ, 2015 ಮತ್ತು 2016ರಲ್ಲಿ ಚಿಲಿ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಸೋಲು ಕಂಡಿತ್ತು.
ಅರ್ಜೆಂಟೀನಾ ಕೋಪಾ ಅಮೆರಿಕಾ ಇತಿಹಾಸದಲ್ಲಿ ತನ್ನ 15ನೇ ಟ್ರೋಫಿ ಗೆಲ್ಲುವ ಮೂಲಕ ಉರುಗ್ವೆ ಜೊತೆಗೆ ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆಯನ್ನು ಹಂಚಿಕೊಂಡಿತು. ಬ್ರೆಜಿಲ್ 9 ಪ್ರಶಸ್ತಿಗಳೊಂದಿಗೆ 2ನೇ ಸ್ಥಾನದಲ್ಲಿದೆ.
ಇದನ್ನು ಓದಿ:Wimbledon 2021: ಕರೋಲಿನಾ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಆ್ಯಶ್ಲಿ ಬಾರ್ಟಿ