ಕಾನ್ಪುರ: ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ವೇಳೆ ನಾವು ಮಾಡಿರುವ ತಪ್ಪುಗಳನ್ನು ಪ್ರಸ್ತುತ ಟೆಸ್ಟ್ ಸರಣಿಯ ವೇಳೆ ಮಾಡಲು ಹೋಗುವುದಿಲ್ಲ ಎಂದು ನ್ಯೂಜಿಲ್ಯಾಂಡ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಕಾನ್ಪುರದಲ್ಲಿ ಗುರುವಾರದಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆಡಲಿದೆ.
ಈ ಹಿಂದೆ ನಮ್ಮ ತಂಡ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಏಕೆ ವಿಫಲವಾಗಿದೆ ಎಂದು ಪರಿಶೀಲನೆ ಮಾಡಿದ್ದೇವೆ. ಈಗ ಆ ತಪ್ಪುಗಳು ಮರುಕಳುಹಿಸದಂತೆ ನಾವು ಜಾಗ್ರತೆ ವಹಿಸುತ್ತೇವೆ. ನಾವು 4 ಸೀಮಿರ್ಗಳು ಮತ್ತು ಒಬ್ಬ ಸ್ಪಿನ್ನರ್ ಸಂಯೋಜನೆಯಲ್ಲಿ ಇಲ್ಲಿ ಆಡಿದರೆ ಯಾವುದೇ ಪ್ರಭಾವ ನೋಡುವುದಿಲ್ಲ. ಹಾಗಾಗಿ ಮೂರು ಸ್ಪಿನ್ನರ್ಗಳನ್ನು ತೆಗೆದುಕೊಂಡರೆ ನಾವು ಇಲ್ಲಿ ಭಾರತವನ್ನು ಮಣಿಸಬಹುದಾದ ಅವಕಾಶಗಳಿವೆ.
ಮೊದಲ ಪಂದ್ಯದಲ್ಲೇ ಭಾರತವನ್ನು ಮಣಿಸಿದರೆ ನಮಗೆ ಮುಂದಿನ ಪಂದ್ಯಗಳಲ್ಲಿ ಅದೇ ಸೂತ್ರವನ್ನು ಪ್ರಯೋಗಿಸುತ್ತೇವೆ ಎಂದು ಹೇಳಲಾಗದು. ಪಿಚ್ ಪರಿಸ್ಥಿತಿಗೆ ಅನುಗುಣವಾಗಿ ಆಗಿಂದಾಗ್ಗೆ ತಂಡದ ತಂತ್ರಗಾರಿಕೆಗಳನ್ನು ಬದಲಾಯಿಸಿಕೊಳ್ಳಬೇಕು. ನಾವು ಟೆಸ್ಟ್ ಕ್ರಿಕೆಟ್ನಲ್ಲಿ ಕೆಲವು ಸೂತ್ರಗಳನ್ನು ಪಾಲಿಸಿಕೊಂಡು, ನಮ್ಮ ಆಟವನ್ನು ಕೂಡ ಬದಲಾಯಿಸಿಕೊಳ್ಳುತ್ತೇವೆ ಎಂದು ಸ್ಟೆಡ್ ವಿವರಿಸಿದರು.
ಸಾಕಷ್ಟು ಸಮಯದಿಂದ ವಿಶ್ರಾಂತಿಯಿಲ್ಲದೆ ಕ್ರಿಕೆಟ್ ಆಡುತ್ತಿರುವ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರಿಷಭ್ ಪಂತ್ಗೆ ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಇನ್ನು ಟಿ20 ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಕೂಡ ಮೊದಲ ಟೆಸ್ಟ್ನಲ್ಲಿ ಆಡುತ್ತಿಲ್ಲ. ಸ್ಟಾರ್ ಆರಂಭಿಕ ರಾಹುಲ್ ಕೂಡ ಗಾಯದಿಂದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ನಲ್ಲಿ ಯುವ ಆಟಗಾರರೊಂದಿಗೆ ಭಾರತ ಕಣಕ್ಕಿಳಿಯಲಿದೆ.
ಇದನ್ನೂ ಓದಿ: ಶತಕದ ಬಗ್ಗೆ ಚಿಂತೆಯಿಲ್ಲ, ತಂಡಕ್ಕೆ ಅಗತ್ಯವಾದ ರನ್ಗಳಿಸುವುದರಲ್ಲೇ ನನಗೆ ತೃಪ್ತಿ: ಚೇತೇಶ್ವರ್ ಪೂಜಾರ