ಲೀಡ್ಸ್: ಭಾರತ ತಂಡದ ನಾಯಕ 2ನೇ ಟೆಸ್ಟ್ನಲ್ಲಿ ಎದುರಾಳಿ ಇಂಗ್ಲೆಂಡ್ ತಂಡವನ್ನು ತಮ್ಮ ಆಕ್ರಮಣಶೀಲತೆಯಿಂದ ಕೆಣಕಿ ಯಶಸ್ವಿಯಾಗಿದ್ದರು. ಲಾರ್ಡ್ಸ್ನಲ್ಲಿ ಗೆಲುವಿನ ಸಹಿಯುಂಡಿದ್ದ ಭಾರತೀಯರು ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ನಲ್ಲಿ ಆಂಗ್ಲರ ವಿರುದ್ಧ ತಮ್ಮ ಹಿಡಿತ ಕಳೆದುಕೊಂಡಿದ್ದಾರೆ.
ಆದರೆ, ವಿರಾಟ್ ಕೊಹ್ಲಿಯ ಆಕ್ರಮಣಶೀಲತೆಯ ಮನೋಭಾವನೆಗೆ ಟೀಮ್ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ಬೆಂಬಲ ಸಿಕ್ಕಿಲ್ಲ. ಲೆಜೆಂಡರಿ ಕ್ರಿಕೆಟರ್ ಪ್ರಕಾರ ಕೊಹ್ಲಿ ಪ್ರತಿ ವಿಕೆಟ್ ಬಿದ್ದಾಗ ತಮ್ಮ ಮುಖದಲ್ಲಿ ಅಷ್ಟೊಂದು ಆಕ್ರಮಣಶೀಲತೆ ಪ್ರದರ್ಶನ ತೋರುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
2ನೇ ಟೆಸ್ಟ್ ಪಂದ್ಯದ ನಂತರ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಸೇರಿದಂತೆ ಕ್ರಿಕೆಟ್ ಜಗತ್ತು ಕೊಹ್ಲಿಯ ಆಕ್ರಮಣ ಭಾರತೀಯ ತಂಡವನ್ನು ಹೇಗೆ ಪರಿವರ್ತಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಹಿಂದಿನ ಭಾರತೀಯ ತಂಡಗಳು ಇಂಗ್ಲೆಂಡ್ನಲ್ಲಿ ಯಾವಾಗಲೂ ಅವಹೇಳನಕ್ಕೆ ಒಳಗಾಗುತ್ತಿದ್ದರು, ಆದರೆ, ಕೊಹ್ಲಿ ತಂಡದ ವಿರುದ್ಧ ಅದು ಸಾಧ್ಯವಿಲ್ಲ ಎಂದಿದ್ದರು. ಆದರೆ, ಗವಾಸ್ಕರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆಕ್ರಮಣಕಾರಿ ಮನೋಭಾವನೆ ಅಗತ್ಯವಿಲ್ಲ ಎಂದಿದ್ದಾರೆ.
ನೀವು ಹಿಂದಿನ ಪೀಳಿಗೆ ಹೆದರುತ್ತಿತ್ತು ಎಂದು ಹೇಳಿದರೆ ಅದು ಒಪ್ಪುವ ಮಾತಲ್ಲ. ನಮ್ಮ ಪೀಳಿಗೆಯ ಯಾರಾದರೂ ಇಲ್ಲಿ ಹಿಂಸೆಗೆ ಒಳಗಾಗಿದ್ದೆವು ಎಂದು ಹೇಳಿದರೆ ನನಗೆ ತುಂಬಾ ಬೇಸರವಾಗುತ್ತಿತ್ತು. ನೀವು ಒಮ್ಮೆ ದಾಖಲೆ ನೋಡಿ, 1971ರಲ್ಲಿ ನಾವು ಇಲ್ಲಿ ಗೆಲುವು ಸಾಧಿಸಿದ್ದೇವೆ. ಅದು ನನ್ನ ಮೊದಲ ಇಂಗ್ಲೆಂಡ್ ಪ್ರವಾಸವಾಗಿತ್ತು. 1974ರಲ್ಲಿ ಆಂತರಿಕ ಸಮಸ್ಯೆ ಹೊಂದಿದ್ದರಿಂದ 0-3ರಲ್ಲಿ ಸೋತೆವು.
ಆದರೆ, 1986ರಲ್ಲಿ 2-0ಯಲ್ಲಿ ಗೆದ್ದಿದ್ದೆವು, ನಮಗೆ ಆ ಬಾರಿ 3-0ಯಲ್ಲಿ ಗೆಲ್ಲುವ ಅವಕಾಶ ಕೂಡ ಇತ್ತು ಎಂದು ಗವಾಸ್ಕರ್ ನಾಸಿರ್ ಹುಸೇನ್ ಹೇಳಿಕೆಗೆ ತಿರುಗೇಟು ನೀಡಿದ್ದರು. ಹಾಗೆ ಮಾತು ಮುಂದುವರಿಸಿ" ಎದುರಾಳಿಯನ್ನು ನೋಡಿದಾಗ ಕೋಪದಿಂದ ವರ್ತಿಸುವುದು ಆಕ್ರಮಣಶೀಲತೆ ಎಂದು ನಾನು ಭಾವಿಸುವುದಿಲ್ಲ. ಬದಲಾಗಿ ನೀವು ಉತ್ಸಾಹವನ್ನು ತೋರಿಸಬಹುದು, ಪ್ರತಿ ವಿಕೆಟ್ ಪತನದ ನಂತರ ಕಿರುಚಾಡದೇ ನಿಮ್ಮ ತಂಡದ ಕಡೆಗೆ ನಿಮ್ಮ ಬದ್ಧತೆಯನ್ನು ತೋರಿಸಬೇಕು" ಎಂದು ಹೆಸರೇಳದೆ ಗವಾಸ್ಕರ್ ಕೊಹ್ಲಿ ಕಾಲೆಳೆದಿದ್ದಾರೆ.
ಇದನ್ನು ಓದಿ:ಲಾರ್ಡ್ಸ್ ಬಳಿಕ ಲೀಡ್ಸ್‌ನಲ್ಲೂ ಇಂಗ್ಲಿಷ್ ಅಭಿಮಾನಿಗಳ ಆಟಾಟೋಪ: ಸಿರಾಜ್ ಮೇಲೆ ಚೆಂಡು ಎಸೆದು ವಿಕೃತಿ