ಚಂಡೀಗಢ: ಜೆಪಿ ಅತ್ರೆ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಹೆಚ್ಚಿನ ಅಭ್ಯಾಸಕ್ಕಾಗಿ ಡಿಎವಿ ಅಕಾಡೆಮಿಗೆ ತೆರಳಿದ್ದಾರೆ. ಜೆಪಿ ಅತ್ರೆ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಅರ್ಜುನ್ ತೆಂಡೂಲ್ಕರ್ ಗೋವಾ ಅಸೋಸಿಯೇಶನ್ ಪರವಾಗಿ ಬ್ಯಾಟ್ ಬೀಸಲಿದ್ದಾರೆ.
ಈ ಕಾರಣಕ್ಕಾಗಿ ಅವರು ಡಿಎವಿ ಅಕಾಡೆಮಿಗೆ ತೆರಳಿದ್ದು, ಅಲ್ಲಿ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಯೋಗರಾಜ್ ಸಿಂಗ್ 1980 ರ ದಶಕದಲ್ಲಿ ಟೀಂ ಇಂಡಿಯಾ ಪರ ಆಡಿದ್ದರು. ಅವರು ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು, ಅದೇ ಎದುರಾಳಿಯ ವಿರುದ್ಧ ಬ್ರಿಸ್ಬೇನ್‌ನಲ್ಲಿ ತಮ್ಮ ODI ಚೊಚ್ಚಲ ಪಂದ್ಯವನ್ನೂ ಆಡಿದರು.
ಅರ್ಜುನ್ ತೆಂಡೂಲ್ಕರ್ ಆಲ್ರೌಂಡ್ ಪ್ಲೇಯರ್ ಆಗಿ ಗುರುತಿಸಿ ಕೊಂಡಿದ್ದಾರೆ, ಅವರು ಎಡಗೈ ವೇಗದ ಬೌಲರ್ ಮತ್ತು ಎಡಗೈ ಬ್ಯಾಟ್ಸ್‌ಮನ್. ಶ್ರೀಲಂಕಾ ವಿರುದ್ಧ 2018ರಲ್ಲಿ ಅಂಡರ್- 19 ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. 2020-21 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹರಿಯಾಣ ವಿರುದ್ಧ ದೇಶಿಯ ಕ್ರಿಕೆಟ್ಗೂ ಎಂಟ್ರಿ ಕೊಟ್ಟಿದ್ದರು, ಈ ಪಂದ್ಯದಲ್ಲಿ 34ರನ್ ಕೊಟ್ಟು ಒಂದು ವಿಕೆಟ್ ಗಳಿಸಿದ್ದರು.
ಫೆಬ್ರವರಿ 2021 ರಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮುನ್ನ ನಡೆದ ಐಪಿಎಲ್ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತು. ಆದರೆ ಈ ವರೆಗೆ ಐಪಿಎಲ್ನಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿಲ್ಲ.
ಇದನ್ನೂ ಓದಿ : ಹಾಕಿ ಇಂಡಿಯಾದ ಅಧ್ಯಕ್ಷರಾಗಿ ದಿಲೀಪ್ ಟಿರ್ಕಿ ಅವಿರೋಧ ಆಯ್ಕೆ