ಹೈದಾಬಾದ್(ಡೆಸ್ಕ್): 2021ಕ್ಕೆ ಗುಡ್ ಬೈ ಹೇಳುವುದಕ್ಕೆ ಕೇವಲ ವಾರವಷ್ಟೇ ಬಾಕಿ ಉಳಿದಿದೆ. ವರ್ಷದ ಕೊನೆಯ ತಿಂಗಳಿನಲ್ಲಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಹಲವಾರು ಸಿಹಿ ನೆನಪುಗಳು ಮತ್ತು ಅಷ್ಟೇ ಸಮನಾದ ಕಹಿ ಘಟನೆಗಳನ್ನು ಹೊಂದಿವೆ. ಇದು ಭಾರತೀಯ ಕ್ರೀಡೆಗೂ ಅನ್ವಯವಾಗುತ್ತದೆ. ಆದರೆ, ಭಾರತೀಯ ಕ್ರೀಡಾಭಿಮಾನಿಗಳಿಗೆ 2021 ಕಹಿ ಘಟನೆಗಿಂತಲೂ ಹೆಚ್ಚು ಅವಿಸ್ಮರಣೀಯ ಕ್ಷಣಗಳನ್ನು ನೀಡಿದೆ.
ವರ್ಷಾರಂಭದಲ್ಲಿ ಕೋವಿಡ್ ಸಂಕಷ್ಟದ ನಡುವೆ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಜಯಿಸಿದ್ದು, ಒಲಿಂಪಿಕ್ಸ್ನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆದ್ದಿದ್ದು ಮತ್ತು ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಕ್ಷಣಗಳು ಹಲವಾರು ವರ್ಷಗಳ ಕಾಲ ಭಾರತೀಯರ ಮನದಲ್ಲಿ ಉಳಿದುಕೊಳ್ಳಲಿದೆ.
ಆಸ್ಟ್ರೇಲಿಯಾದ ವಿರುದ್ಧ ಗಬ್ಬಾ ಟೆಸ್ಟ್ ವಿಜಯ ಮತ್ತು ಸರಣಿ ಜಯ
ಭಾರತ ತಂಡ ಐಪಿಎಲ್ ಮುಗಿಸಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ವಿಶ್ವ ಟೆಸ್ಟ್ಚಾಂಪಿಯನ್ಶಿಪ್ ಫೈನಲ್ ಮೇಲೆ ಕಣ್ಣಿಟ್ಟಿದ ಟೀಮ್ ಇಂಡಿಯಾಗೆ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಅನಿವಾರ್ಯವಾಗಿತ್ತು. ಆದರೆ, ಟೂರ್ನಿ ಆರಂಭವಾಗುವುದಕ್ಕೆ ಮೊದಲೇ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಟೂರ್ನಿಯಿಂದ ಹೊರ ಬಿದ್ದರೆ, ಕೊಹ್ಲಿ ಮೊದಲ ಪಂದ್ಯದ ನಂತರ ವೈಯಕ್ತಿಕ ಕಾರಣ ನೀಡಿ ಹೊರ ಬಂದಿದ್ದರು. ಮೊದಲ ಟೆಸ್ಟ್ ಪಂದ್ಯವನ್ನು ಸೋತಿದ್ದ ಭಾರತ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಮೂರನೇ ಪಂದ್ಯವನ್ನು ಪ್ರಯಾಸದಿಂದ ಡ್ರಾ ಸಾಧಿಸಿತ್ತು.
ಕೊನೆಯ ಪಂದ್ಯ ಆಸ್ಟ್ರೇಲಿಯಾ 32 ವರ್ಷಗಳಿಂದ ಸೋಲೇ ಕಾಣದ, ಆಸೀಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬ್ರಿಸ್ಬೇನ್ನಲ್ಲಿ ಆಯೋಜನೆಯಾಗಿತ್ತು. ಈ ಪಂದ್ಯಕ್ಕೆ ಹೋಗುವ ಮುನ್ನ ಭಾರತ ತಂಡದಲ್ಲಿ ಕೇವಲ ರಹಾನೆ ಮತ್ತು ಪೂಜಾರ ಹೊರತುಪಡಿಸಿದರೆ ಉಳಿದ ಬ್ಯಾಟರ್ಗಳು 10 ಟೆಸ್ಟ್ ಪಂದ್ಯಗಳನ್ನೂ ಆಡಿರಲಿಲ್ಲ.
5 ಆಟಗಾರರು ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ತಂಡ ಆಸ್ಟ್ರೇಲಿಯಾ ನೀಡಿದ್ದ 328 ರನ್ಗಳ ಗುರಿಯನ್ನು ಶುಬ್ಮನ್ ಗಿಲ್, ರಿಷಭ್ ಪಂತ್ ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ ಭಾರತ ಯಶಸ್ವಿಯಾಗಿ ಚೇಸ್ ಮಾಡಿ ಆಸೀಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಲ್ಲದೆ, ಇಡೀ ವಿಶ್ವ ಕ್ರಿಕೆಟ್ ತನ್ನತ್ತ ನೋಡುವಂತೆ ಮಾಡಿತ್ತು. ಇದು 2021ಕ್ಕೆ ಮಾತ್ರವಲ್ಲದೇ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಬಹುದೊಡ್ಡ ಮೈಲಿಗಲ್ಲಾಗಿ ಉಳಿಯಲಿದೆ.
ಟೋಕಿಯೋದಲ್ಲಿ ಇತಿಹಾಸ ಬರೆದ ಭಾರತ
ಭಾರತ ತಂಡ ಟೋಕಿಯೋ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಚಿನ್ನ, ಎರಡು ಬೆಳ್ಳಿ ಮತ್ತು 4 ಕಂಚಿನ ಪದಕ ಸೇರಿದಂತೆ ಒಟ್ಟು 7 ಪದಕ ಪಡೆಯುವ ಮೂಲಕ ಒಲಿಂಪಿಕ್ ಇತಿಹಾಸದಲ್ಲಿ ಗರಿಷ್ಠ ಪದಕ ಸಾಧನೆ ಮಾಡಿತು.
ಐತಿಹಾಸಿಕ ಚಿನ್ನ
ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟರು. 23 ವರ್ಷದ ಜಾವಲಿನ್ ಥ್ರೋವರ್ ಒಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ 2ನೇ ಭಾರತೀಯ ಎನಿಸಿಕೊಂಡಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಅಭಿನವ್ ಬಿಂದ್ರಾ ಮೊದಲ ಚಿನ್ನ ಗೆದಿದ್ದರು.
41 ವರ್ಷಗಳ ಬಳಿಕ ಹಾಕಿಯಲ್ಲಿ ಪದಕ
ದೇಶದ ಪ್ರಮುಖ ಕ್ರೀಡೆಯಲ್ಲಿ ಒಂದಾಗಿರುವ ಹಾಕಿಯಲ್ಲಿ 41 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಸಾಧಿಸುವಲ್ಲಿ ಭಾರತ ತಂಡ ಸಫಲವಾಯಿತು. ಸೆಮಿಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ ಸೋಲು ಕಂಡಿದ್ದ ಭಾರತ, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಐತಿಹಾಸಿಕ ಪದಕ ತನ್ನದಾಗಿಸಿಕೊಂಡಿತು.
ಇದೇ ಕೂಟದಲ್ಲಿ ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚನು ಬೆಳ್ಳಿ, ಲವ್ಲಿನಾ ಬೋರ್ಗಹೈನ್ ಬಾಕ್ಸಿಂಗ್ನಲ್ಲಿ ಕಂಚು ಗೆದ್ದರೆ, ಕುಸ್ತಿಯಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಮತ್ತು ಭಜರಂಗ್ ಪೂನಿಯಾ ಕಂಚು ಹಾಗೂ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಕಂಚಿನ ಪದಕ ಗೆಲ್ಲುವಲ್ಲಿ ಸಫಲವಾದರು.
ಪ್ಯಾರಾಲಿಂಪಿಕ್ಸ್ನಲ್ಲಿ ಐತಿಹಾಸಿಕ ಸಾಧನೆ
ಭಾರತ 1968ರಲ್ಲಿ ಪ್ಯಾರಾಲಿಂಪಿಕ್ಸ್ಗೆ ಪದಾರ್ಪಣೆ ಮಾಡಿತ್ತು. ಅಂದಿನಿಂದ 2016ರವರೆಗೆ ಒಟ್ಟು 12 ಪದಕಗಳನ್ನು ಗೆದ್ದಿತ್ತು. ಆದರೆ, ಈ ವರ್ಷ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಬರೋಬ್ಬರಿ 19 ಪದಕಗಳನ್ನು ಗೆದ್ದು ಅಮೋಘ ಸಾಧನೆ ಮಾಡಿದ್ದರು. ಇದರಲ್ಲಿ 5 ಚಿನ್ನದ ಪದಕವಿದ್ದರೆ, 8 ಬೆಳ್ಳಿ ಮತ್ತು 6 ಕಂಚಿನ ಪದಕ ಸೇರಿದ್ದವು.
ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಬೆಳ್ಳಿ
ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಅನುಭವಿ ಶಟ್ಲರ್ ಕಿಡಂಬಿ ಶ್ರೀಕಾಂತ್ ಐತಿಹಾಸಿಕ ಬೆಳ್ಳಿ ಪದಕ ಪಡೆದರು. ಪ್ರತಿಷ್ಠಿತ ಕೂಟದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಶಟ್ಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಆದರೆ, ಫೈನಲ್ನಲ್ಲಿ ಸಿಂಗಾಪುರ್ ಶಟ್ಲರ್ ಲೋ ಕೀನ್ ವಿರುದ್ಧ ಸೋಲು ಕಂಡು ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿದ್ದರು. ಇವರ ಜೊತೆಗೆ 20 ವರ್ಷದ ಯುವ ಶಟ್ಲರ್ ಲಕ್ಷ್ಯ ಸೇನ್ ಕೂಡ ಕಂಚಿನ ಪದಕ ಗೆದ್ದಿದ್ದರು.
ಮಿಥಾಲಿ ರಾಜ್ ಗರಿಷ್ಠ ಅಂತಾರಾಷ್ಟ್ರೀಯ ರನ್ ದಾಖಲೆ
ಭಾರತ ಮಹಿಳಾ ಕ್ರಿಕೆಟ್ನ ಪಿಲ್ಲರ್ ಆಗಿರುವ 39 ವರ್ಷದ ಮಿಥಾಲಿರಾಜ್ 2021ರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ಗಳಿಸಿದ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರರಾದರು. ಅವರು ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ನಾಯಕಿ ಚಾರ್ಲೊಟ್ ಎಡ್ವರ್ಡ್ (10,273) ಅವರನ್ನು ಹಿಂದಿಕ್ಕಿದರು. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10,453 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಸುನೀಲ್ ಚೆಟ್ರಿ ಗರಿಷ್ಠ ಗೋಲು
ವಿಶ್ವದ ಅದ್ಭುತ ಫುಟ್ಬಾಲರ್ಗಳಲ್ಲಿ ಒಬ್ಬರಾಗಿರುವ ಭಾರತ ತಂಡದ ನಾಯಕ ಸುನೀಲ್ ಚೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಹೆಚ್ಚು ಗೋಲುಗಳಿಸಿದ ಪಟ್ಟಿಯಲ್ಲಿ ವಿಶ್ವದ ಶ್ರೇಷ್ಠ ಫುಟ್ಬಾಲರ್ಗಳಾದ ಪೀಲೆ(77) ಅವರನ್ನು ಹಿಂದಿಕ್ಕುವ ಜೊತೆಗೆ ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿ(80) ಅವರೊಂದಿಗೆ ಗರಿಷ್ಠ ಗೋಲು ಸಿಡಿಸಿದ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.