ಮುಂಬೈ: ಒಂದು ವೇಳೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಡ್ರಾ, ಟೈ ಅಥವಾ ರದ್ದಾದರೆ ಫಲಿತಾಂಶ ಏನಾಗಲಿದೆ ಎಂದು ತಿಳಿದುಕೊಳ್ಳುವುದಕ್ಕೆ ಬಿಸಿಸಿಐ ಕಾತರ ವ್ಯಕ್ತಪಡಿಸುತ್ತಿದೆ. ಮುಂದಿನ ತಿಂಗಳು ನಡೆಯುವ ಈ ಪಂದ್ಯಕ್ಕೆ ತಂಡವನ್ನು ಶಾರ್ಟ್ಲಿಸ್ಟ್ ಮಾಡಿಕೊಳ್ಳಲು ಬಿಸಿಸಿಐ, ಐಸಿಸಿ ಆಟದ ಷರತ್ತುಗಳಿಗಾಗಿ ಎದುರು ನೋಡುತ್ತಿದೆ.
ಜೂನ್ 18ರಿಂದ 22ರವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ನಡೆಯಲಿದೆ. ಆದರೆ, ಐಸಿಸಿ ಫೈನಲ್ ಬಗ್ಗೆ ಇನ್ನು ಯಾವುದೇ ಷರತ್ತುಗಳನ್ನು ಬಿಡುಗಡೆ ಮಾಡಿಲ್ಲ. ಪಂದ್ಯ ಫಲಿತಾಂಶ ಕಾಣದಿದ್ದರೆ ಏನಾಗಲಿದೆ ಎನ್ನುವುದರ ಬಗ್ಗೆ ಬಿಸಿಸಿಐ ಕೂತೂಹಲದಿಂದ ಕಾಯುತ್ತಿದೆ.
ಇದು ಮತ್ತೊಂದು ದ್ವಿಪಕ್ಷೀಯ ಸರಣಿ ಟೆಸ್ಟ್ ಪಂದ್ಯದಂತಲ್ಲ, ಆದ್ದರಿಂದ, ನಾವು ಆಟದ ಪರಿಸ್ಥಿತಿಗಳ ಬಗ್ಗೆ ತಿಳಿದು ಕೊಳ್ಳಬೇಕಾಗಿರುತ್ತದೆ. ಹಾಗಾಗಿ ಚಾಂಪಿಯನ್ಶಿಪ್ ಫೈನಲ್ ಕುರಿತು ಮೂರು ಮೂಲಭೂತ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ " ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
" ಕನಿಷ್ಠ ಒಂದು ಇನ್ನಿಂಗ್ಸ್ಗಳಿಲ್ಲದೇ ಡ್ರಾ, ಟೈ ಅಥವಾ ಅಂತಿಮವಾಗಿ ಎರಡೂ ತಂಡಗಳೂ ಕನಿಷ್ಠ ಒಂದು ಇನ್ನಿಂಗ್ಸ್ ಆಡಲಾಗದೇ ಪಂದ್ಯ ವಾಷ್ಔಟ್ ಆದ ಸಂದರ್ಭದಲ್ಲಿ ಫಲಿತಾಶ ಏನಾಗುತ್ತದೆ? " ಎಂಬುದರ ಬಗ್ಗೆ ತಮಗೆ ಕೂತೂಹಲವಿದೆ. ಹಾಗಾಗಿ ಐಸಿಸಿ ಮುಂದಿನ ದಿನಗಳಲ್ಲಿ ಪಂದ್ಯದ ಷರತ್ತುಗಳನ್ನು ಪ್ರಕಟಿಸಲಿದೆ. ಅದಕ್ಕೆ ನಿರ್ದಿಷ್ಟ ದಿನಾಂಕ ಹೇಳಲು ಸಾಧ್ಯವಿಲ್ಲ, ಆದರೆ, ಅವರು ಅದನ್ನು ಶೀಘ್ರದಲ್ಲೇ ಕಳುಹಿಸುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ಆ ಅಧಿಕಾರಿ ಹೇಳಿದ್ದಾರೆ.
ಇನ್ನು ನ್ಯೂಜಿಲ್ಯಾಂಡ್ ತಂಡ ಇಂಗ್ಲೆಂಡ್ನಲ್ಲಿ ಆತಿಥೇಯ ತಂಡದ ವಿರುದ್ಧ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಜೂನ್ 2 ರಂದೇ ಇಂಗ್ಲೆಂಡ್ಗೆ ತೆರಳಲಿರುವ ಭಾರತ ತಂಡ ಸೌತಾಂಪ್ಟನ್ನಲ್ಲಿ ಕ್ವಾರಂಟೈನ್ಗೆ ಒಳಗಾಗಾಗಲಿದೆ. ಇದು ಕಠಿಣವಾಗಿರುತ್ತದೆಯೋ ಅಥವಾ ಸಾಧಾರಣವಾಗಿರುತ್ತದೆಯೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅವರು ತಿಳಿಸಿದ್ದಾರೆ.
ಇದನ್ನು ಓದಿ: ವಾಷಿಂಗ್ಟನ್ ಸುಂದರ್ಗೆ ತನ್ನಿಂದ ಸೋಂಕು ತಗುಲಬಾರದೆಂಬ ಕಾರಣಕ್ಕೆ ತಂದೆಯಿಂದ ಈ ತ್ಯಾಗ!