ಲಂಡನ್, ಇಂಗ್ಲೆಂಡ್: ಜೂನ್ 18ರಿಂದ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಪಾರಮ್ಯತೆ ಕಠಿಣ ಸನ್ನಿವೇಶಗಳನ್ನು ಸುಲಭವಾಗಿ ಎದುರಿಸಲಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದು, ಭಾರತ ತಂಡ ಟೆಸ್ಟ್ ಪಂದ್ಯದಲ್ಲಿ ಆಡುವ ಆಟ ಕ್ರಿಕೆಟ್ ಜಗತ್ತಿನಲ್ಲಿ ಅಸೂಯೆ ಮೂಡಿಸುತ್ತದೆ ಎಂದಿದ್ದಾರೆ.
ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಓಪನರ್ ರೋಹಿತ್ ಶರ್ಮಾ ಸೇರಿದಂತೆ ಬ್ಯಾಟಿಂಗ್ ದಿಗ್ಗಜರಿದ್ದು, ಮಧ್ಯಮ ಮತ್ತು ಕೆಳ-ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮೈದಾನಕ್ಕೆ ಇಳಿಯುವ ಸಾಧ್ಯತೆಯಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗವಾಸ್ಕರ್, ಅವರಿಬ್ಬರೂ ಈಗಾಗಲೇ ಆರು ಟೆಸ್ಟ್ ಶತಕಗಳನ್ನು ಬಾರಿಸಿದ್ದು, ಉತ್ತಮವಾಗಿ ಆಡುವ ನಿರೀಕ್ಷೆಯಿದೆ ಎಂದಿದ್ದಾರೆ.
ಟೀಂ ಇಂಡಿಯಾದ ಕೆಲವು ಸೋಲುಗಳ ಬಗ್ಗೆಯೂ ಮಾತನಾಡಿರುವ ಸುನಿಲ್ ಗವಾಸ್ಕರ್, ಆಸ್ಟ್ರೇಲಿಯಾದ ಅಡಿಲೇಡ್ನಂತಹ ಕೆಟ್ಟ ಪಂದ್ಯಗಳನ್ನೂ ಭಾರತ ಆಡಿದೆ. ಆದರೆ ಟೀಂ ಇಂಡಿಯಾ ಅತ್ಯದ್ಭುತ ರಬ್ಬರ್ ಬಾಲ್ ಆಗಿದ್ದು, ಮತ್ತೆ ಪುಟಿದೇಳುತ್ತದೆ ಮತ್ತು ಪುಟಿಯುತ್ತಲೇ ಇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ವೀಕ್ಷಿಸಿ: ರೊನಾಲ್ಡೋ 'ಕೋಲಾ'ಹಲ ಸೃಷ್ಟಿಸಿದ ಬಳಿಕ ಬಿಯರ್ ಕೆಳಗಿಟ್ಟ ಫ್ರಾನ್ಸ್ ಆಟಗಾರ
ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋತರೂ ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಗೆದ್ದಿತ್ತು. ಜನವರಿ ತಿಂಗಳಲ್ಲಿ ಬ್ರಿಸ್ಬೇನ್ನಲ್ಲಿ ಸರಣಿಯ ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿ ತನ್ನದಾಗಿಸಿಕೊಂಡಿತ್ತು.
ನ್ಯೂಜಿಲ್ಯಾಂಡ್ ತಂಡದಲ್ಲೂ ಕೇನ್ ವಿಲಿಯಮ್ಸನ್ ಮತ್ತಿತರ ವಿಶ್ವದ ಅಗ್ರಗಣ್ಯ ಬ್ಯಾಟ್ಸ್ಮನ್ಗಳಿದ್ದು, ಇಂಗ್ಲೆಂಡ್ ವಿರುದ್ಧ ಜಯ ಗಳಿಸಿದ ನಂತರ ಭಾರಿ ಆತ್ಮವಿಶ್ವಾಸದಲ್ಲಿದ್ದಾರೆ. ಇಂಗ್ಲೆಂಡ್ ವಾತಾರಣದಲ್ಲಿ ಎರಡೂ ತಂಡಗಳು ಯಾವ ರೀತಿಯಲ್ಲಿ ಪ್ರದರ್ಶನ ನೀಡುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಮಾರ್ಚ್ನಲ್ಲಿ ಟೀಂ ಇಂಡಿಯಾ ಕೊನೆಯ ಪಂದ್ಯವಾಡಿದ್ದು, ತಾವು ಪಂದ್ಯದಲ್ಲಿ ಆಡುವ ಹಸಿವಿನಲ್ಲಿದ್ದಾರೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.