ಮುಂಬೈ (ಮಹಾರಾಷ್ಟ್ರ): ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಮೊದಲ ಗೆಲುವು ಸಾಧಿಸಿದೆ. ಯುಪಿ ವಾರಿಯರ್ಸ್ ತಂಡದ ವಿರುದ್ಧ ಐದು ವಿಕೆಟ್ಗಳ ಜಯ ದಾಖಲಿಸಿರುವ ಸ್ಮೃತಿ ಮಂಧಾನ ಪ್ಲೇ ಆಪ್ ಕನಸು ಜೀವಂತವಾಗಿ ಉಳಿಸಿಕೊಂಡಿದೆ.
ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ಗೆ ಇಳಿದ ಯುಪಿ ವಾರಿಯರ್ಸ್ ತಂಡವನ್ನು 135 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಆರ್ಸಿಬಿ ಬೌಲರ್ಗಳು ಯಶಸ್ವಿಯಾದರು.
ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಅಲಿಸ್ಸಾ ಹೀಲಿ (1) ಮತ್ತು ದೇವಿಕಾ ವೈದ್ಯ (0) ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದರು. ಮೂರನೇ ಕ್ರಮಾಂಕದಲ್ಲಿ ಬಂದ ಕಿರಣ್ ನವಗಿರೆ (22) ಬಾರಿಸಿದರು. ನಂತರದಲ್ಲಿ ಗ್ರೇಸ್ ಹ್ಯಾರಿಸ್ (46) ಬಿರುಸಿನ ಬ್ಯಾಟ್ ಬೀಸಿದರು. ದೀಪ್ತಿ ಶರ್ಮಾ (22), ಎಕ್ಲೆಸ್ಟೋನ್ (12) ರನ್ಗಳ ಮಾತ್ರ ಕಲೆ ಹಾಕಿದರು. ಆದರೆ, ಕೊನೆಗೆ 19.3 ಓವರ್ಗಳಲ್ಲಿ ಸರ್ವಪತನ ಕಂಡ ಯುಪಿ 135 ರನ್ಗಳನ್ನು ಪೇರಿಸಲು ಶಕ್ತವಾಯಿತು.
ಆರ್ಸಿಬಿ ಪರ ಎಲ್ಲಿಸ್ ಪೆರ್ರಿ ಮೂರು ವಿಕೆಟ್ ಕಿತ್ತಿದರು. ಸೋಫಿ ಡಿವೈನ್ ಮತ್ತು ಆಶಾ ಶೋಬನಾ ತಲಾ ಎರಡು ವಿಕೆಟ್ ಕಬಳಿಸಿದರು. ಮೇಗನ್ ಶುಟ್ ಹಾಗೂ ತಲಾ ಶ್ರೇಯಾಂಕಾ ಪಾಟೀಲ್ ಒಂದು ವಿಕೆಟ್ ಪಡೆದರು.
136 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡ 18 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಆರಂಭದಲ್ಲೇ 14 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆರ್ಸಿಬಿ ಆಘಾತ ಅನುಭವಿಸಿತ್ತು. ಸೋಫಿ ಡಿವೈನ್ (14) ಮತ್ತು ನಾಯಕಿ ಸ್ಮೃತಿ ಮಂಧಾನ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಎಲ್ಲಿಸ್ ಪೆರ್ರಿ (10), ಹೀದರ್ ನೈಟ್ (24), ಕನಿಕಾ ಅಹುಜಾ (46) ಹಾಗೂ ರಿಚಾ ಘೋಷ್ (31 ಅಜೇಯ) ರನ್ಗಳ ನೆರವಿನೊಂದಿಗೆ ಆರ್ಸಿಬಿ ತಂಡ ಗೆಲುವು ಸಾಧಿಸಿತು. ಶ್ರೇಯಾಂಕಾ ಪಾಟೀಲ್ ಅಜೇಯ 5 ರನ್ ಬಾರಿಸಿದರು. ಯುಪಿ ಪರವಾಗಿ ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದರೆ, ಗ್ರೇಸ್ ಹ್ಯಾರಿಸ್, ಸೋಫಿ ಎಕ್ಲೆಸ್ಟೋನ್, ದೇವಿಕಾ ವೈದ್ಯ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಅಕ್ಷರ್ ಆಲ್ರೌಂಡರ್ ಆಟ ಭಾರತಕ್ಕೆ ಭರವಸೆ: ಏಳನೇ ವಿಕೆಟ್ಗೂ ಪಟೇಲ್ ಬ್ಯಾಟಿಂಗ್ ಬಲ