ಹರಾರೆ (ಜಿಂಬಾಬ್ವೆ): ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ ಈಗಾಗಲೆ ಎಂಟು ತಂಡಗಳು ನಿರ್ಣಯ ಆಗಿದೆ. ಎರಡು ತಂಡಗಳು 9 ಮತ್ತು 10ನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಇದಕ್ಕಾಗಿ ಜಿಂಬಾಬ್ವೆಯಲ್ಲಿ 10 ತಂಡಗಳು ಪೈಪೋಟಿಗೆ ಇಳಿಯಲಿದೆ. 2023ರ ವಿಶ್ವಕಪ್ಗಾಗಿ ನಾಳೆಯಿಂದ ಅರ್ಹತಾ ಪಂದ್ಯ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಮತ್ತು ನೇಪಾಳ ಮುಖಾಮುಖಿಯಾಗಲಿವೆ.
ಐದು ತಂಡಗಳ ಎ ಮತ್ತು ಬಿ ಗುಂಪುಗಳನ್ನು ಮಾಡಲಾಗಿದೆ. ಎ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ, ನೆದರ್ಲ್ಯಾಂಡ್, ನೇಪಾಳ ಮತ್ತು ಅಮೆರಿಕಾ ಆಡಲಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್ ಸ್ಕಾಟ್ಲ್ಯಾಂಡ್, ಒಮನ್ ಮತ್ತು ಯುಎಇ ಸ್ಪರ್ಧಿಸಲಿವೆ. ವಿಶ್ವ ಕಪ್ ಗೆದ್ದ ತಂಡಗಳಾದ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ಗೆ ಈ ಬಾರಿ ಕಠಿಣ ಸವಾಲಿರುವುದಂತೂ ಖಂಡಿತ. ಜಿಂಬಾಬ್ವೆ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅದರ ಜೊತೆಗೆ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡುತ್ತಿರುವುದು ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.
2023ರ ಜೂನ್ 18ರಿಂದ ಜೂನ್ 27ರ ವರೆಗೆ ಏಕ ಮುಖಾಮುಖಿಯ ಲೀಗ್ ಪಂದ್ಯಗಳು ನಡೆಯಲಿದ್ದು, ಜೂನ್ 29ರ ನಂತರ ಸೂಪರ್ ಸಿಕ್ಸ್, ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ನಡೆಯಲಿದೆ. ಫೈನಲ್ ಪಂದ್ಯ ಜುಲೈ 9 ಭಾನುವಾರ ನಡೆಯಲಿದೆ. ಇದರಲ್ಲಿ ಅಂತಿಮವಾಗಿ ಆಡುವ ಎರಡು ತಂಡಗಳು ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.
ಇನ್ನೂ ಬಿಡುಗಡೆಯಾಗಿಲ್ಲ ವಿಶ್ವ ಕಪ್ ವೇಳಾಪಟ್ಟಿ: 2023ರ ವಿಶ್ವಕಪ್ನ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೇಳಾಪಟ್ಟಿಯ ಕರುಡನ್ನು ಸಲ್ಲಿಸಿದೆ ಎನ್ನಲಾಗಿದ್ದು, ಇದನ್ನು ಐಸಿಸಿ ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಒಪ್ಪಿಗೆಗಾಗಿ ಕಳುಹಿಸಿ ಕೊಟ್ಟಿದೆ ಎಂದು ಮಾಹಿತಿ ಇದೆ. ಪಾಕಿಸ್ತಾನ ಭಾರತಕ್ಕೆ ಪ್ರವಾಸ ಮಾಡಲು ನಿರಾಕರಿಸುವ ಸಾಧ್ಯತೆಗಳಿದ್ದು, ಐಸಿಸಿ ಮತ್ತು ಬಿಸಿಸಿಐ ಈ ಬಗ್ಗೆ ಯಾವ ರೀತಿಯ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದು ಕಾದುನೋಡಬೇಕಿದೆ.
ಕಳೆದ ಎರಡು ವಾರಗಳ ಹಿಂದೆ ಐಸಿಸಿಯ ನಿಯೋಗ ಒಂದು ಪಾಕಿಸ್ತಾನಕ್ಕೆ ವಿಶ್ವಕಪ್ ಪಂದ್ಯದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಳಿ ಚರ್ಚಿಸಲು ತೆರಳಿತ್ತು. ಇದರಲ್ಲಿ ಗುಜರಾತ್ನ ಕ್ರೀಡಾಂಗಣದಲ್ಲಿ ಆಡಲು ಪಾಕಿಸ್ತಾನ ನಿರಾಕರಿಸಿತ್ತು ಎನ್ನಲಾಗಿದೆ. ಈಗ ಏಷ್ಯಾಕಪ್ನ ಹೈಬ್ರಿಡ್ ಮಾದರಿಯನ್ನೇ ಐಸಿಸಿ ಮುಂದೆ ಪಿಸಿಬಿ ಇಟ್ಟಲ್ಲಿ ಆಯೋಜಕ ದೇಶವಾದ ಭಾರತ ನಿರ್ಣಯ ಏನು ಎಂಬುದನ್ನೂ ಐಸಿಸಿ ಕೇಳಬೇಕಾಗುತ್ತದೆ. ಹೀಗಾಗಿ ವೇಳಾಪಟ್ಟಿ ಬಿಡುಗಡೆ ಇನ್ನೂ ತಡವಾಗುವ ಸಾಧ್ಯತೆ ಇದೆ.
ಇದಕ್ಕೂ ಮೊದಲು ಐಸಿಸಿ ವರ್ಷಕ್ಕೂ ಮುನ್ನವೇ ವೇಳಾಪಟ್ಟಿಯನ್ನು ಪ್ರಕಟಿಸುತ್ತಿತ್ತು. ಆದರೆ ಈ ವರ್ಷ ಇನ್ನು ಐದು ತಿಂಗಳು ಮಾತ್ರ ಬಾಕಿ ಇದ್ದರೂ ಸಹ ಪ್ರಕಟಿಸಿಲ್ಲ. ಭಾರತ ಕೆಲ ಮೈದಾನಗಳ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ.
ಇದನ್ನೂ ಓದಿ: The Ashes 2023: 15ನೇ ಬಾರಿಗೆ ಸ್ಟುವರ್ಟ್ ಬ್ರಾಡ್ಗೆ ವಿಕೆಟ್ ಕೊಟ್ಟ ವಾರ್ನರ್: ವರ್ಷಗಳಿಂದ ಮುಂದುವರೆದ ಕಳಪೆ ಫಾರ್ಮ್