ಕೋಲ್ಕತ್ತಾ: ಐಸಿಸಿ ಏಕದಿನ ವಿಶ್ವಕಪ್ (ICC World Cup) ಸರಣಿ ಆರಂಭಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಇದಕ್ಕಾಗಿ ಎಲ್ಲ ತಂಡಗಳು ಈಗಾಗಲೇ ಭರದ ಸಿದ್ದತೆ ಕೂಡ ನಡೆಸಿವೆ. ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಈ ಮೂಲಕ ವಿಶ್ವಕಪ್ ಅಭಿಯಾನ ಪ್ರಾರಂಭಗೊಳ್ಳಲಿದೆ. ಭಾನುವಾರ ವಿಶ್ವಕಪ್ನ 5ನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಡೆಯಲಿದೆ.
ಇತ್ತೀಚೆಗೆ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಗಂಭೀರವಾಗಿ ಗಾಯಗೊಂಡು ವಿಶ್ವಕಪ್ನಿಂದ ಹೊರಬಿದ್ದಿದ್ದು, ಇವರ ಸ್ಥಾನಕ್ಕೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೀಗ ಭಾರತ ಬೌಲಿಂಗ್, ಬ್ಯಾಟಿಂಗ್ ಲೈನ್ನಲ್ಲೂ ಬಲಿಷ್ಠ ತಂಡವಾಗಿದೆ.
ಈ ಕುರಿತು ಭಾರತದ ಮಾಜಿ ಕ್ರಿಕೆಟರ್ ಮತ್ತು ಮುಖ್ಯ ಆಯ್ಕೆಗಾರರಾಗಿರುವ ಕಿರಣ್ ಮೋರೆ ಈಟಿವಿ ಭಾರತ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿಶ್ವಕಪ್ ಬೇಟೆಗೆ ಭಾರತ ತಂಡ ಸಜ್ಜಾಗಿದೆ. ಈ ಬಾರಿಯ ಪ್ಲಸ್ ಪಾಯಿಂಟ್ ಎಂದರೆ ಹೆಚ್ಚಿನ ವಿಕೆಟ್ ಪಡೆಯಬಲ್ಲ ಅನುಭವಿ ಬೌಲರ್‌ಗಳು ತಂಡದಲ್ಲಿದ್ದಾರೆ. ಕೆಲ ಬೌಲರ್‌ಗಳು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ವಿಶ್ವಕಪ್ಗೆ ಸಿದ್ಧರಾಗಿದ್ದಾರೆ. ಸಂಪೂರ್ಣವಾಗಿ ಲಯ ಕಂಡುಕೊಂಡರೆ ತಂಡಕ್ಕೆ ಮತ್ತಷ್ಟು ಲಾಭವಾಗಲಿದೆ ಎಂದು ಹೇಳಿದರು.
ಬ್ಯಾಟಿಂಗ್ ಲೈನ್ಅಪ್ ಬಗ್ಗೆ ಮಾತನಾಡಿದ ಅವರು, 'ಮೆನ್ ಇನ್ ಬ್ಲೂ' ತಂಡಕ್ಕೆ ಬ್ಯಾಟಿಂಗ್ ಯಾವಾಗಲೂ ಸ್ಟ್ರಾಂಗ್ ಸೂಟ್ ಆದರೆ, ಈ ಬಾರಿ ಬೌಲಿಂಗ್ ಕೂಡ ಮಾರಕವಾಗಿ ಕಾಣುತ್ತಿದೆ. ಎಲ್ಲ ಬೌಲರ್‌ಗಳು ಮೊದಲ 10 ಓವರ್‌ಗಳಿಂದ ಮಧ್ಯಮ, ಡೆತ್ ಓವರ್‌ಗಳವರೆಗೂ ವಿಕೆಟ್‌ಗಳನ್ನು ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದಾರೆ. ಇವರ ಹೊರತಾಗಿ ರವೀಂದ್ರ ಜಡೇಜಾ ಕೂಡ ಇರಲಿದ್ದಾರೆ. ಕುಲ್ದೀಪ್ ಯಾದವ್ ಬೌಲಿಂಗ್ ದಾಳಿ ಮೂಲಕ ತಂಡದ ಸಾಮರ್ಥ್ಯ ಹೆಚ್ಚಿಸಲಿದ್ದಾರೆ.
ಟೀಂ ಇಂಡಿಯಾದ ಎಲ್ಲ ಆಟಗಾರರು ಅಗತ್ಯವಾದ ಕೌಶಲ್ಯಗಳನ್ನು ಹೊಂದಿದ್ದು, ವಿಶ್ವಕಪ್ ನಂತಹ ದೊಡ್ಡ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಈಗಾಗಲೇ ಭಾರತ ಮೂರು ಸ್ವರೂಪದ ಕ್ರಿಕೆಟ್ನಲ್ಲಿ ಅಗ್ರ ಸ್ಥಾನದಲ್ಲಿದ್ದು, ಮೊದಲಿನಿಂದಲೂ ಉತ್ತಮ ಫಾರ್ಮ್ನಲ್ಲಿದೆ ಎಂದು ಮೋರೆ ಹೇಳಿದ್ದಾರೆ.
ಪ್ರಸ್ತುತ ವಿಶ್ವಕಪ್ ತಂಡದಲ್ಲಿರುವ ಎಲ್ಲ ಆಟಗಾರರು ಸಾಕಷ್ಟು ODI ಮತ್ತು T20 ಪಂದ್ಯಗಳನ್ನು ಆಡಿರುವ ಅನುಭವಿಗಳಾಗಿದ್ದಾರೆ. ಇದಲ್ಲದೇ ಹಾಗಾಗಿ ಭಾರತ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್: ಪಂದ್ಯಾವಳಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತಷ್ಟು ಮೇಲ್ದರ್ಜೆಗೆ, ವಿಶೇಷತೆಗಳೇನು?