ರಾಜ್ಕೋಟ್: ರಾಮಾಯಣದಲ್ಲಿ ಆಂಜನೇಯ ಲಂಕೆಗೆ ಬೆಂಕಿ ಇಟ್ಟರೆ, ರಾಜ್ಕೋಟ್ನಲ್ಲಿ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ಕ್ರಿಕೆಟ್ ತಂಡದ ಕನಸಿಗೆ ಬೆಂಕಿ ಇಟ್ಟರು. ಪ್ರಥಮ ಸರಣಿ ಗೆಲುವಿನ ಉತ್ಸಾಹದಲ್ಲಿದ್ದ ತಂಡವನ್ನು ಏಕಮೇವವಾಗಿ ಧೂಳೀಪಟ ಮಾಡಿದ ಸೂರ್ಯ, ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಭಾರತೀಯನ ಬಿರುಗಾಳಿ ಆಟಕ್ಕೆ ವಿಶ್ವಕ್ರಿಕೆಟ್ ಬಹುಪರಾಕ್ ಹೇಳಿದೆ.
ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಕೆಚ್ಚೆದೆಯ ಆಟವಾಡಿದ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 112 ರನ್ ಬಾರಿಸಿ ಶತಕ ಸಂಭ್ರಮಾಚರಣೆ ಮಾಡಿದರು. ಇದು ಟಿ20 ಕ್ರಿಕೆಟ್ನಲ್ಲಿ ಸೂರ್ಯನ ಮೂರನೇ ಶತಕವಾಗಿದೆ. ಭರ್ಜರಿ ಶತಕದ ಬಲದಿಂದ ಭಾರತ ಪಂದ್ಯದಲ್ಲಿ 228 ರನ್ಗಳ ಬೃಹತ್ ಮೊತ್ತ ಪೇರಿಸಿತು. ಶ್ರೀಲಂಕಾ 137 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಗಂಟುಮೂಟೆ ಕಟ್ಟಿ 91 ರನ್ಗಳ ಸೋಲು ಕಂಡಿತು.
ಸೂರ್ಯನ ಸಿಡಿಲಬ್ಬರದ ಶತಕ: ದ್ವಿಶತಕ ವೀರ ಇಶಾನ್ ಕಿಶನ್ ಬೇಗನೇ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ರಾಹುಲ್ ತ್ರಿಪಾಠಿ 16 ಎಸೆತಗಳಲ್ಲಿ ಬಿರುಸಿನ ಬ್ಯಾಟ್ ಮಾಡಿ 35 ರನ್ ಮಾಡಿದರು. ದೊಡ್ಡ ಹೊಡೆತಕ್ಕೆ ಕೈಹಾಕಿದ ತ್ರಿಪಾಠಿ ಅವರು ಕರುಣಾರತ್ನೆ ಬೌಲಿಂಗ್ನಲ್ಲಿ ಔಟಾದರು. ಇದಾದ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ರಾಜ್ಕೋಟ್ನಲ್ಲಿ ರಾಜನಾಗಿ ಮೆರೆದ ಸೂರ್ಯ ಮೈದಾನದ ಪ್ರತಿ ಮೂಲೆಯಲ್ಲೂ ಚೆಂಡನ್ನು ನುಗ್ಗಿಸಿದರು.
ಶ್ರೀಲಂಕಾದ ಬೌಲರ್‌ಗಳನ್ನು ಮನಸೋಇಚ್ಚೆ ಬೆಂಡೆತ್ತಿದರು. 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಸೂರ್ಯಕುಮಾರ್, ಬಳಿಕ ಬ್ಯಾಟ್ ಅನ್ನು ಇನ್ನಷ್ಟು ಚಾರ್ಜ್ ಮಾಡಿ ಮುಂದಿನ 19 ಎಸೆತಗಳಲ್ಲಿ 50 ರನ್ ಬಾರಿಸಿ ಶತಕದ ಸಂಭ್ರಮಾಚರಣೆ ಮಾಡಿದರು. ಇದು ಭಾರತೀಯರ ಬಿರುಬೀಸಾದ ಬ್ಯಾಟಿಂಗ್ಗೆ ಸಾಕ್ಷಿಯಾಗಿತ್ತು. ಕೊನೆಯವರೆಗೂ ಅಜೇಯರಾಗಿ ಉಳಿದ ಆಟಗಾರ ಹಲವು ಮನಮೋಹಕ ಸಿಕ್ಸರ್ಗಳನ್ನು ಸಿಡಿಸಿದರು.
ಸೂರ್ಯಕುಮಾರ್ ಯಾದವ್ರನ್ನು ಕಟ್ಟಿಹಾಕಲು ದಸುನ್ ಶನಕಾ ಪಡೆ ಏನೆಲ್ಲಾ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. 9 ಸಿಕ್ಸರ್, 7 ಬೌಂಡರಿಗಳು ಅಬ್ಬರದ ಆಟಕ್ಕೆ ಲೆಕ್ಕ ಹೇಳುತ್ತಿದ್ದವು. ಕೊನೆಯ ಓವರ್ನ ಕೊನೆಯ ಎಸೆತಗಳಲ್ಲಿ ಚಾಮಿಕಾ ಕರುಣಾರತ್ನೆಗೆ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಇನಿಂಗ್ಸ್ಗೆ ಅಂತ್ಯ ಹಾಡಿದರು.
ಸೂರ್ಯನ ಪ್ರಖರತೆಗೆ ಅಭಿಮಾನಿಗಳು ಫಿದಾ: ಇನ್ನು, ಸೂರ್ಯಕುಮಾರ್ ಪ್ರಖರ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಈತನೊಬ್ಬ ಆಟಗಾರನಿದ್ದರೆ ಸಾಕು ಎಂದು ಗುಣಗಾನ ಮಾಡಿದ್ದಾರೆ. ಬಿರುಗಾಳಿ ಬ್ಯಾಟಿಂಗ್ ಬಳಿಕ ಸೂರ್ಯಕುಮಾರ್ ಯಾದವ್ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿಸಿದ್ದರು. ಹಲವು ಆಟಗಾರನ ಹಲವು ಶೈಲಿಯ ಹೊಡೆಯಗಳುಳ್ಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾವದ್ ಭಾರತ ಕ್ರಿಕೆಟ್ ತಂಡದ ಒನ್ ಮ್ಯಾನ್ ಆರ್ಮಿ, ಚುಟುಕು ಮಾದರಿಯ ಕ್ರಿಕೆಟ್ನ ಜಾದೂಗಾರ. ಬ್ಯಾಟಿಂಗ್ಗೆ ಇಳಿದರೆ ಮೈದಾನದಲ್ಲಿ ತೂಫಾನ್ ಏಳಲಿದೆ. ಬ್ಯಾಟಿಂಗ್ ರಭಸಕ್ಕೆ ಚೆಂಡು ಗಾಳಿಯಲ್ಲೇ ತೇಲಾಡುತ್ತದೆ, ಸೂರ್ಯನಿಗೆ ಎಲ್ಲೆಯೇ ಇಲ್ಲ ಎಂದೆಲ್ಲಾ ಗುಣಗಾನ ಮಾಡಲಾಗಿದೆ.
ವರ್ಷದ ಮೊದಲ, ಒಟ್ಟಾರೆ ಮೂರನೇ ಶತಕ: ಭಾರತ ಈ ವರ್ಷ ತವರು ನೆಲದಲ್ಲಿ ಆಡುತ್ತಿರುವ ಮೊದಲನೇ ಸರಣಿ ಇದಾಗಿದೆ. ಮೊದಲ ಟಿ 20 ಸರಣಿಯಲ್ಲೇ ಸೂರ್ಯಕುಮಾರ್ ಯಾದವ್ ಶತಕ ಗಳಿಸಿ, ವರ್ಷದ ಮೊದಲ ಮತ್ತು ವೃತ್ತಿ ಬದುಕಿನ ಮೂರನೇ ಶತಕ ಗಳಿಸಿದರು. ಈ ವರ್ಷ ಶತಕ ಗಳಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಕಳೆದ ವರ್ಷದಿಂದ ಅತ್ಯದ್ಭುತ ಫಾರ್ಮ್ನಲ್ಲಿರುವ ಸೂರ್ಯ ಕುಮಾರ್ ಯಾದವ್ 833 ಅಂಕಗಳಿಂದ ಐಸಿಸಿ ಟಿ20 ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ವರ್ಷದ ಚೊಚ್ಚಲ ಸರಣಿ ಗೆದ್ದ ಭಾರತ: 91 ರನ್ಗಳ ಬೃಹತ್ ಮೊತ್ತದ ಗೆಲುವು ಸಾಧಿಸಿ ವಿಕ್ರಮ