ಮೌಂಟ್ ಮೌಂಗನುಯಿ : ಭಾರತ ತಂಡದ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧದ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ 250 ವಿಕೆಟ್ ಪಡೆದು ತಮ್ಮದೇ ವಿಶ್ವದಾಖಲೆಯನ್ನು ಮತ್ತಷ್ಟು ವಿಸ್ತರಿಸಿಕೊಂಡರು.
ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಏಕೈಕ ಮಹಿಳಾ ಬೌಲರ್ ಆಗಿರುವ ಜೂಲನ್, ಇದೀಗ 250ರ ಗಡಿರೇಖೆ ದಾಟಿ ಸಾಗುತ್ತಿದ್ದಾರೆ. ವಿಶೇಷವೆಂದರೆ, ಇವರು ಪ್ರಸ್ತುತ ವಿಶ್ವಕಪ್ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದು, ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ವಿಂಡೀಸ್ ಬೌಲರ್ ಅನಿಶಾ ಮೊಹಮ್ಮದ್(18) ಅವರಿಗಿಂತ 70 ವಿಕೆಟ್ ಮುಂದಿದ್ದಾರೆ.
ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಟಮ್ಮಿ ಬ್ಯೂಮಾಂಟ್ ಅವರ ವಿಕೆಟ್ ಪಡೆಯುವುದರೊಂದಿಗೆ ಜೂಲನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 350 ವಿಕೆಟ್ ಮೈಲುಗಲ್ಲು ಸಹ ತಲುಪಿದರು. ತಮ್ಮ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಗೋಸ್ವಾಮಿ, ನಾನು ಮೈದಾನದಲ್ಲಿ ತಂಡಕ್ಕಾಗಿ ಆಡಲು ಬಯಸುತ್ತೇನೆಯೇ ಹೊರತು ವೈಯಕ್ತಿಕ ಸಾಧನೆ ಬಗ್ಗೆ ಆಲೋಚಿಸುವುದಿಲ್ಲ ಎಂದರು.
"250 ವಿಕೆಟ್ ಪಡೆದಿರುವುದಕ್ಕೆ ನನಗೆ ಸಂತೋಷವಿದೆ. ಆದರೆ, ಆ ಬಗ್ಗೆ ಜೀವನದಲ್ಲಿ ಎಂದೂ ನಾನು ಯೋಚಿಸಿರಲಿಲ್ಲ" ಎಂದಿದ್ದಾರೆ. ಕ್ರಿಕೆಟ್ ಬದುಕಿನ ನಿವೃತ್ತಿ ಬಗ್ಗೆ ಮಾತನಾಡುತ್ತಾ, ಸದ್ಯಕ್ಕೆ ನಾನು ನಿವೃತ್ತಿಯ ಬಗ್ಗೆ ಆಲೋಚನೆ ಮಾಡಿಲ್ಲ. ಸದ್ಯಕ್ಕೆ ನಾವು ವಿಶ್ವಕಪ್ ಕಡೆಗೆ ಗಮನ ಹರಿಸಿದ್ದೇವೆ.
ಪ್ರಮುಖ ಟೂರ್ನಿ ನಡೆಯುತ್ತಿದೆ. ತಂಡದ ಹಿರಿಯ ಸದಸ್ಯೆಯಾಗಿ ನನ್ನಿಂದ ಕೈಲಾದಷ್ಟು ಕೊಡುಗೆ ನೀಡಲು ಪ್ರಯತ್ನಿಸುವೆ ಎಂದು ತಿಳಿಸಿದ ಅವರು, ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಜಯ ತಂದು ಕೊಡಲು ಪ್ರಯತ್ನಿಸುವುದಾಗಿ ಹೇಳಿದರು. ಬುಧವಾರ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 134 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು ತಲುಪಿ ಜಯ ಸಾಧಿಸಿತು.
ಇದನ್ನೂ ಓದಿ:ಐಸಿಸಿ ಮಹಿಳಾ ವಿಶ್ವಕಪ್ 2022 : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು