ಸೂರತ್: ಬಿಸಿಸಿಐ ಆಯೋಜಿಸುವ ಮಹಿಳಾ ಟ20 ಟೂರ್ನಮೆಂಟ್ನಲ್ಲಿ ಸ್ಮೃತಿ ಮಂಧಾನ ನೇತೃತ್ವದ ಮಹಾರಾಷ್ಟ್ರ ಮತ್ತು ಸ್ನೇಹ್ ರಾಣಾ ನೇತೃತ್ವದ ರೈಲ್ವೇಸ್ ತಂಡಗಳು ಫೈನಲ್ ಪ್ರವೇಶಿಸಿವೆ.
ಸೋಮವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಬರೋಡಾ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಬರೋಡಾ ಯಂಗ್ ವಿಕೆಟ್ ಕೀಪರ್ ಯಸ್ತಿಕ ಭಾಟಿಯಾ(71, 45 ಎಸೆತ) ಅವರ ಅರ್ಧಶತಕದ ಹೊರತಾಗಿಯೂ ಕೇವಲ 121ರನ್ಗಳ ಸಾಧಾರಣ ಮೊತದ್ತ ದಾಖಲಿಸಿತ್ತು. ಉತ್ಕರ್ಷ ಪವಾರ್ 21ಕ್ಕೆ 3 ಮತ್ತು ಮುಕ್ತ ಮಗ್ರೆ 32ಕ್ಕೆ2 ವಿಕೆಟ್ ಪಡೆಯುವ ಮೂಲಕ ರಾಧಾ ಯಾದವ್ ನೇತೃತ್ವದ ಬರೋಡಾ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸುವಲ್ಲಿ ಮಹಾರಾಷ್ಟ್ರ ತಂಡಕ್ಕೆ ನೆರವಾಗಿದ್ದರು.
ಇನ್ನು 122ರನ್ಗಳ ಸಾಧಾರಣ ಮೊತ್ತವನ್ನು ಮಹಾರಾಷ್ಟ್ರ ತಂಡ 19.1 ಓವರ್ಗಳಲ್ಲಿ ಚೇಸ್ ಮಾಡಿತು. ಮಂಧಾನ ಈ ಪಂದ್ಯದಲ್ಲಿ 13 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೆ, ಶಿವಾಲಿ ಶಿಂದೆ 37 ಎಸೆತಗಳಲ್ಲಿ 44 ಮತ್ತು ಟಿಎಸ್ ಹಸಬ್ನಿಸ್ 32 ಎಸೆತಗಳಲ್ಲಿ 33 ಮತ್ತು ದೇವಿಕ ವೈದ್ಯ ಅಜೇಯ 22 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಒಡಿಶಾ ವಿರುದ್ಧ ರೈಲ್ವೇಸ್ ಜಯಬೇರಿ: 2ನೇ ಸೆಮಿಫೈನಲ್ ಪಂದ್ಯದಲ್ಲಿ ಒಡಿಶಾ ವಿರುದ್ಧ ರೈಲ್ವೇಸ್ ತಂಡ 35 ರನ್ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್ ಸಬ್ಬಿನೇನಿ ಮೇಘನಾ ಅವರ 84(63 ಎಸೆತ) ಮತ್ತು ನುಜಾತ್ ಪರ್ವೀನ್ 55(51 ಎಸೆತ) ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 159 ರನ್ಗಳಿಸಿತ್ತು.
160 ರನ್ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಒಡಿಶಾ ನಿಗದಿತ ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ಗಳಿಸಲಷ್ಟೇ ಶಕ್ತವಾಯಿತು.
ಒಡಿಶಾ ಪರ ಮಾಧುರಿ ಮೆಹ್ತಾ 35, ಸುಶ್ರೀ ದಿಬ್ಯಾದರ್ಶಿನಿ 29, ಕಾಜಲ್ ಜೇನಾ 24 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರೈಲ್ವೇಸ್ ಪರ ಸ್ವಗತಿಕ ರಾತ್ 23ಕ್ಕೆ2, ತನುಜು ಕನ್ವರ್ 25ಕ್ಕೆ2, ಪೂನಮ್ ಯಾದವ್ 20ಕ್ಕೆ1, ನಾಯಕಿ ರಾಣಾ 14ಕ್ಕೆ1 ವಿಕೆಟ್ ಪಡೆದರು.
ಮೇ 4 ರಂದು ಮಹಾರಾಷ್ಟ್ರ ಮತ್ತು ರೈಲ್ವೇಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಇದು ಮಹಾರಾಷ್ಟ್ರ ತಂಡದ 3ನೇ ಫೈನಲ್ ಆಗಿದ್ದರೆ, ರೈಲ್ವೇಸ್ನ 9ನೇ ಫೈನಲ್ ಆಗಿದೆ. ಒಟ್ಟು 9 ಬಾರಿ ರೈಲ್ವೇಸ್ ಚಾಂಪಿಯನ್ ಆಗಿದ್ದರೆ, ಮಹಾರಾಷ್ಟ್ರ ತಲಾ ಒಂದು ಬಾರಿ ಚಾಂಪಿಯನ್ ಮತ್ತು ರನ್ನರ್ ಅಪ್ ಆಗಿದೆ.
ಇದನ್ನೂ ಓದಿ:ವೃತ್ತಿ ಜೀವನದ ಅಂತ್ಯದವರೆಗೆ ಧೋನಿಗೆ ಸಿಕ್ಕಂತಹ ಬೆಂಬಲ ನಮಗ್ಯಾರಿಗೂ ಸಿಗಲಿಲ್ಲ: ಯುವರಾಜ್ ಸಿಂಗ್