ಮುಂಬೈ: ನಿನ್ನೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಪಂದ್ಯಗಳಿಗೆ ಬಿಡುವು ನೀಡಲಾಗಿತ್ತು. ವಾರಾಂತ್ಯಕ್ಕೆ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಕಾದಿದೆ. ಇಂದು ಮತ್ತು ನಾಳೆ ಡಬಲ್ ಹೆಡರ್ ಪಂದ್ಯಗಳಿದ್ದು, ಇಂದಿನ ಮೊದಲ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ಆಡಿದರೆ, ಸಂಜೆಯ ಪಂದ್ಯದಲ್ಲಿ ಗುಜರಾತ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಲಿವೆ.
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಯುಪಿ ವಾರಿಯರ್ಸ್ ತಂಡ ಕಳೆದೆರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರಿಂದ ಪ್ಲೇ-ಆಫ್ ತಲುಪಲು ಅವರ ಹಾದಿ ಕಷ್ಟಕರವಾಗಿದೆ. ಮೇ 24ರಂದು ನಡೆಯಲಿರುವ ಎಲಿಮಿನೇಟರ್‌ನಲ್ಲಿ ಆಡಬೇಕಾದರೆ ಇಂದಿನ ಪಂದ್ಯ ಸೇರಿದಂತೆ ಉಳಿದ ಎರಡು ಪಂದ್ಯಗಳನ್ನು ಯುಪಿ ಗೆಲ್ಲಲೇಬೇಕಿದೆ.
ಸೋಲನ್ನೇ ಕಾಣದೆ ಸತತ ಐದು ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ ಮುಂಬೈ ಇಂಡಿಯನ್ಸ್ ತಂಡ ಪ್ಲೇ-ಆಫ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಇಂಡಿಯನ್ಸ್ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಗ್ರ ಸ್ಥಾನದಲ್ಲಿ ಮುಂಬೈ ಮುಂದುವರೆದರೆ ನೇರ ಫೈನಲ್ಗೆ ಪ್ರವೇಶ ಪಡೆಯಲಿದೆ.
ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ನೇತೃತ್ವದ ಕ್ಯಾಪಿಟಲ್ಸ್ ಆರರಲ್ಲಿ ಮೂರರಲ್ಲಿ ಗೆದ್ದಿದೆ. ಎರಡು ಪಂದ್ಯಗಳಲ್ಲಿ ಡೆಲ್ಲಿ ಸೋಲು ಕಂಡಿದೆ. ವಾರಿಯರ್ಸ್ ನಾಲ್ಕು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ಆರು ಪಂದ್ಯಗಳಲ್ಲಿ ಎರಡನ್ನು ಗೆದ್ದು, ಮೂರರಲ್ಲಿ ಸೋಲು ಕಂಡಿದೆ. ಗುಜರಾತ್ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರು ಪಂದ್ಯಗಳಲ್ಲಿ ಒಂದನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಅಲಿಸ್ಸಾ ಹೀಲಿ ನೇತೃತ್ವದ ಯುಪಿ ಇಂದಿನ ಪಂದ್ಯದಲ್ಲಿ ಸೋತರೆ, ಅದು ಹ್ಯಾಟ್ರಿಕ್ ಸೋಲಿನಂತಾಗುತ್ತದೆ. ತಂಡದಲ್ಲಿ ದೇವಿಕಾ ವೈದ್ಯ, ಕಿರಣ್ ನವಗಿರೆ ಅವರಂತಹ ಬಲಿಷ್ಠ ಬ್ಯಾಟರ್ ಗಳಿದ್ದು, ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆಲ್‌ರೌಂಡರ್‌ಗಳಾದ ತಹ್ಲಿಯಾ ಮೆಕ್‌ಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ ಕೂಡ 150ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ದೀಪ್ತಿ ಶರ್ಮಾ ಮತ್ತು ಸೋಫಿ ಎಕ್ಲೆಸ್ಟೋನ್ ಇಲ್ಲಿಯವರೆಗೆ ಉತ್ತಮ ಬೌಲಿಂಗ್ ಮಾಡಿದ್ದಾರೆ. ಮತ್ತೊಂದೆಡೆ, ಸಯ್ಕಾ ಇಶಾಕ್ 5.66ರ ಎಕಾನಮಿಯಲ್ಲಿ ಮುಂಬೈ ಪರವಾಗಿ ಐದು ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಪಡೆದಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಇದುವರೆಗೆ ಡಬ್ಲ್ಯುಪಿಎಲ್‌ನಲ್ಲಿ ಮೂರು ಅರ್ಧಶತಕ ಗಳಿಸಿ ಅದ್ಭುತ ಫಾರ್ಮ್ನಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸ್ಕಿವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್/ಚೋಲೆ ಟ್ರಿಟಾನ್, ಇಸ್ಸಿ ವಾಂಗ್, ಧಾರಾ ಗುರ್ಜಾರ್, ಅಮನ್ಜೋತ್ ಕೌರ್, ಹಮಾರಿಯಾ ಖಾಜಿ, ಸೈಕಾ ಇಶಾಕ್, ಜಿಂತಿಮನಿ ಕಲಿತಾ.
ಯುಪಿ ವಾರಿಯರ್ಸ್ ಸಂಭಾವ್ಯ ತಂಡ: ಅಲಿಸ್ಸಾ ಹೀಲಿ (ನಾಯಕಿ/ವಿಕೆಟ್ ಕೀಪರ್), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಸಿಮ್ರಾ ಶೇಖ್, ದೀಪ್ತಿ ಶರ್ಮಾ,ಶ್ವೇತಾ ಸೆಹ್ರಾವತ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕವಾಡ
ಆರ್ಸಿಬಿ-ಗುಜರಾತ್ ಮುಖಾಮುಖಿ: ಅಂಕಪಟ್ಟಿಯ ಕೊನೆಯಲ್ಲಿರುವ ಗುಜರಾತ್ ಮತ್ತು ಆರ್ಸಿಬಿ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಯಾವುದೇ ತಂಡ ಗೆದ್ದರು ಎದುರಾಳಿ ತಂಡ ಪ್ಲೇ-ಆಫ್ನಿಂದ ಹೊರ ಬೀಳಲಿದೆ. ಇದಕ್ಕೂ ಮುನ್ನ ನಡೆಯುವ ಮುಂಬೈ - ಯುಪಿ ಫೈಟ್ನಲ್ಲಿ ವಾರಿಯರ್ಸ್ ಗೆಲುವು ಸಾಧಿಸಿದರೆ, ಆರ್ಸಿಬಿ ಹಾಗೂ ಗುಜರಾತ್ಗೆ ಪ್ಲೇ-ಆಫ್ ಕನಸು ಭಗ್ನವಾದಂತೆ. ಆರ್ಸಿಬಿಗೆ ಕನಿಕಾ ಅಹುಜಾ ಬಂದಿರುವುದು ಬಲ ಕೊಟ್ಟಿದೆ. ಅವರ ಆಲ್ರೌಂಡ್ ಪ್ರದರ್ಶನ ಮೊದಲ ಗೆಲುವಿಗೆ ಕಾರಣವಾಗಿತ್ತು.
ಸಂಭಾವ್ಯ ಆರ್ಸಿಬಿ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್/ಪ್ರೀತಿ ಬೋಸ್
ಸಂಭವನೀಯ ಗುಜರಾತ್ ತಂಡ: ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ (ನಾಯಕಿ), ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಮಾನ್ಸಿ ಜೋಶಿ, ಅಶ್ವನಿ ಕುಮಾರ್
ಇದನ್ನೂ ಓದಿ: ದೇಶೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಟಿಮ್ ಪೈನ್