ಸೌಥಾಂಪ್ಟನ್(ಇಂಗ್ಲೆಂಡ್): ಜೂನ್ 18ರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಆರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಕಿವೀಸ್ ತಂಡ ಸಿದ್ಧವಾಗಿದೆ. ಭುಜದ ನೋವಿನಿಂದಾಗಿ ವಿಶ್ರಾಂತಿ ಪಡೆಯುತ್ತಿರುವ ಕೇನ್ ವಿಲಿಯಮ್ಸನ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
ಭುಜ ನೋವಿನ ಕಾರಣ ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ವಿಶ್ರಾಂತಿ ತೆಗೆದುಕೊಂಡಿದ್ದು, ಈವರೆಗೆ ಅವರು ಭಾರತದ ವಿರುದ್ಧ ಟೆಸ್ಟ್ ಪಂದ್ಯ ಆಡುವುದು ಅನುಮಾನ ಎಂದೇ ಹೇಳಲಾಗುತ್ತಿತ್ತು. ಆದರೆ ಈಗ ನ್ಯೂಜಿಲ್ಯಾಂಡ್ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಕಿವೀಸ್ ನಾಯಕತ್ವವನ್ನು ವಿಲಿಯಮ್ಸನ್ ವಹಿಸಿಕೊಳ್ಳಲಿದ್ದಾರೆ.
ಅದರ ಜೊತೆಗೆ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ವಿಕೆಟ್ ಕೀಪರ್ ಬಿ.ಜೆ.ವ್ಯಾಟ್ಲಿಂಗ್ ಹೆಸರು ಕೂಡಾ ನ್ಯೂಜಿಲ್ಯಾಂಡ್ ಪ್ರಕಟಿಸಿರುವ 15 ಮಂದಿ ಆಟಗಾರರ ಪಟ್ಟಿಯಲ್ಲಿದೆ. ಇಬ್ಬರೂ ಲಭ್ಯವಿರುವುದು ತಂಡಕ್ಕೆ ಅತ್ಯಂತ ಮುಖ್ಯ ಎಂದು ಸ್ಟೆಡ್ ಹೇಳಿದ್ದಾರೆ.
ಇದನ್ನೂ ಓದಿ: Viral Video: ಚಿಂಕಾರ ಬೇಟೆ ತಡೆದ ಬಾಲಕ; ರಾಜಸ್ತಾನ ಅರಣ್ಯ ಮಂತ್ರಿಯಿಂದ ಶ್ಲಾಘನೆ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅತ್ಯಂತ ವಿಶೇಷವಾಗಿದ್ದು, ಈ ಪಂದ್ಯಕ್ಕಾಗಿ ಎದುರುನೋಡುತ್ತಿದ್ದೇವೆ. ಭಾರತದ ವಿರುದ್ಧ ಕಠಿಣ ಹಣಾಹಣಿ ನಡೆಯಲಿದೆ ಎಂಬ ಅಭಿಪ್ರಾಯವನ್ನು ಗ್ಯಾರಿ ಸ್ಟೆಡ್ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್ಮನ್ ಟಾಮ್ ಲಾಥಮ್ ನಾಯಕತ್ವ ವಹಿಸಿಕೊಂಡಿದ್ದು, ಕೇನ್ ವಿಲಿಯಮ್ಸನ್ ಕಳೆದ ಮಾರ್ಚ್ನಿಂದಲೂ ಭುಜ ನೋವಿನಿಂದ ಬಳಲುತ್ತಿದ್ದರು.