ಮುಂಬೈ : ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಿ ಗಳಿಸಿಕೊಂಡಿರುವ ಆತ್ಮ ವಿಶ್ವಾಸವನ್ನ ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲೂ ಮುಂದುವರಿಸಿಕೊಂಡು ಹೋಗುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹೇಳಿದ್ದಾರೆ.
ಕೇವಲ ನೆಟ್ ಬೌಲರ್ ಆಗಿ ಆಸ್ಟ್ರೇಲಿಯಾಗೆ ತೆರಳಿದ್ದ ಸುಂದರ್ ಗಾಯದಿಂದ ಹೊರಬಂದ ರವೀಂದ್ರ ಜಡೇಜಾ ಜಾಗದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಮಿಂಚಿದ್ದರು. ಅವರು ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 62 ರನ್ ಮತ್ತು 2ನೇ ಇನ್ನಿಂಗ್ಸ್ನಲ್ಲಿ 22 ರನ್ ಸಿಡಿಸಿ ಐತಿಹಾಸಿಕ ಟೆಸ್ಟ್ ಸರಣಿ ಜಯದಲ್ಲಿ ಪ್ರಮುಖ ಭಾಗವಾಗಿದ್ದರು.
"ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುವುದರಿಂದ ಖಂಡಿತ ಯಾವುದೇ ಸ್ವರೂಪದ ಕ್ರಿಕೆಟ್‌ನಲ್ಲಿ ಕ್ರಿಕೆಟಿಗನಿಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತ ಟೆಸ್ಟ್ ತಂಡದಲ್ಲಿ ಆಡಲು ಅವಕಾಶ ಪಡೆಯುವುದು ಯಾವುದೇ ಯುವ ಕ್ರಿಕೆಟಿಗನ ಕನಸಾಗಿರುತ್ತದೆ.
ಇದೀಗ ನನ್ನ ಜೀವನದಲ್ಲಿ ಅದು ನಿಜವಾಗಿದೆ" ಎಂದು ತಮ್ಮ ಸಂಭ್ರಮ ಹೊರ ಹಾಕಿದ್ದಾರೆ. 21 ವರ್ಷದ ಯುವ ಆಟಗಾರ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧ 3-1ರಲ್ಲಿ ಗೆದ್ದ ಟೆಸ್ಟ್ ತಂಡದಲ್ಲೂ ಭಾರತ ತಂಡದ ಭಾಗವಾಗಿದ್ದರು.
ನಾವು ಕಳೆದ ಎರಡು ಸರಣಿಯಲ್ಲಿ ಅತ್ಯುತ್ತಮ ಗುಣಮಟ್ಟವುಳ್ಳ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಆಡಿದ್ದೇವೆ ಮತ್ತು ಅವರ ವಿರುದ್ಧ ಜಯ ಸಾಧಿಸಿರುವುದು ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಅಲ್ಲದೆ ಎರಡು ಮಹತ್ವದ ಸರಣಿ ವಿಜಯದಿಂದ ನನ್ನಲ್ಲಿ ಹೆಚ್ಚಾಗಿರುವ ಆತ್ಮವಿಶ್ವಾಸವನ್ನು ಈ ಬಾರಿ ಐಪಿಎಲ್ನಲ್ಲೂ ತೆಗೆದುಕೊಂಡು ಹೋಗಲು ಬಯಸುತ್ತೇನೆ ಎಂದು ತಮಿಳುನಾಡು ಆಲ್ರೌಂಡರ್ ತಿಳಿಸಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ತಂಡ ಸತತ ಮೂರು ಜಯ ಸಾಧಿಸಿ ಅಗ್ರಸ್ಥಾನದಲ್ಲಿದೆ. ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈನಲ್ಲಿ ಕಾದಾಡಲಿದೆ.
ಇದನ್ನು ಓದಿ:ನಾಯಕತ್ವದ ರಣತಂತ್ರಗಳನ್ನು ಒಬ್ಬರನ್ನೊಬ್ಬರು ಕಾಪಿ ಮಾಡಿದ ರೋಹಿತ್-ಕೊಹ್ಲಿ!