ನವದೆಹಲಿ: ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಮೇಲೆ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆ ಎಲ್ಲೆಡೆ ವೈರಲ್ ಆಗಿದೆ. ಈ ರಹಸ್ಯ ಕಾರ್ಯಾಚರಣೆಯ ವಿಡಿಯೋದಲ್ಲಿ ಚೇತನ್ ಭಾರತ ತಂಡದ ಆಯ್ಕೆ ಕುರಿತ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಮುಖ್ಯಸ್ಥ ಸೌರವ್ ಗಂಗೂಲಿ ನಡುವಿನ ವಿವಾದದ ಬಗ್ಗೆ ಅವರು ಮಾತನಾಡಿದ್ದಾರೆ. ಈ ರಹಸ್ಯ ಕಾರ್ಯಾಚರಣೆಯ ನಂತರ ಚೇತನ್ ಹಲವು ವಿವಾದಗಳಲ್ಲಿ ಸಿಲುಕಿದ್ದಾರೆ. ಹೀಗಾಗಿ ಬಿಸಿಸಿಐ ಶೀಘ್ರದಲ್ಲೇ ಅವರ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ರಹಸ್ಯ ಕಾರ್ಯಾಚರಣೆಯ ನಂತರ ಚೇತನ್ ಶರ್ಮಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಬಿಸಿಸಿಐ ತನ್ನ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಚೇತನ್ ಶರ್ಮಾ ರಕ್ಷಣೆಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ಗೆ ತಂಡವನ್ನು ಪ್ರಕಟಿಸುವ ಮೊದಲು ಮುಂದಿನ ಆಯ್ಕೆ ಸಮಿತಿ ಸಭೆಗೆ ಹಾಜರಾಗಲು ಬಿಸಿಸಿಐ ಚೇತನ್ ಶರ್ಮಾಗೆ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
ಬಿಸಿಸಿಐ ಮೂಲಗಳು ತಿಳಿಸುವ ಪ್ರಕಾರ, ಈ ರಹಸ್ಯ ಕಾರ್ಯಾಚರಣೆಯ ನಂತರ ಯಾವುದೇ ಆಟಗಾರ ಅಥವಾ ಆಯ್ಕೆದಾರರು ಪತ್ರಕರ್ತರೊಂದಿಗೆ ಸಹ ಸೌಹಾರ್ದಯುತ ಸಂಬಂಧ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಭಾರತದ ಯಾವುದೇ ಪ್ರಮುಖ ಆಟಗಾರರು ಚೇತನ್ ಅವರೊಂದಿಗೆ ಮಾತನಾಡಲೂ ಹಿಂಜರಿಯುತ್ತಿದ್ದಾರೆ.
ಚೇತನ್ ತರಬೇತಿ ಅವಧಿಯಲ್ಲಿ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡುವುದು ಕೂಡಾ ವಿರಳವಾಗಿದೆ. ಅವರು ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್ ಸಂದರ್ಭದಲ್ಲಿ ಮೂಲೆಯಲ್ಲಿ ಕುಳಿತಿದ್ದರು. ಆದರೆ, ಯಾರೂ ಅವರೊಂದಿಗೆ ಮಾತನಾಡಲು ಚಿಂತಿಸಲಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಆಟಗಾರರ ಬಗ್ಗೆ ಮಾತನಾಡಿದ್ದೇನು?: 80ರಿಂದ 85 ರಷ್ಟು ಫಿಟ್ ಆಗಿದ್ದರೂ ತಂಡದಲ್ಲಿ ಉಳಿಯಲು ಆಟಗಾರರು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂದು ಚೇತನ್ ಶರ್ಮಾ ಆರೋಪಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಬುಮ್ರಾ ಮರಳುವ ಬಗ್ಗೆ ತನಗೆ ಮತ್ತು ತಂಡದ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯವಿದೆ ಎಂದಿದ್ದಾರೆ. ಆ ಸರಣಿ ಆಡಲು ಬುಮ್ರಾ ಅರ್ಹರಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್ ಘೋಷಣೆ ವೇಳೆ ತಾಂತ್ರಿಕ ದೋಷ.. 4 ಗಂಟೆಗಳ ಕಾಲ ಮೂರೂ ರಂಗಗಳಲ್ಲಿ ಭಾರತ ನಂ1 ಸ್ಥಾನ