ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 2-0 ಅಂತರದ ಮುನ್ನಡೆ ಸಾಧಿಸಿದ್ದು, ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಉಭಯ ತಂಡಗಳ ನಡುವೆ ನಾಳೆ ಅಂತಿಮ ಪಂದ್ಯ ನಡೆಯಲಿದೆ. ಇದರಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದರೆ ಕ್ಯಾಪ್ಟನ್ ಶಿಖರ್ ಧವನ್ ಹಾಗೂ ಟೀಂ ಇಂಡಿಯಾ ಹೊಸದೊಂದು ಇತಿಹಾಸ ಸೃಷ್ಟಿ ಮಾಡಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಈಗಾಗಲೇ ಸತತವಾಗಿ 12 ಸರಣಿ ಗೆದ್ದು ಹೊಸ ದಾಖಲೆ ಬರೆದಿರುವ ಟೀಂ ಇಂಡಿಯಾ ನಾಳೆಯ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದರೆ ಕೆರಿಬಿಯನ್ ನಾಡಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಮೊದಲ ತಂಡವಾಗಿ ಹೊರಹೊಮ್ಮಲಿದೆ. ಜೊತೆಗೆ ಈ ಸಾಧನೆ ಮಾಡಿರುವ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಶಿಖರ್ ಧವನ್ ಪಾತ್ರರಾಗಲಿದ್ದಾರೆ.
ಹೊಸ ರೆಕಾರ್ಡ್ ಬರೆಯಲಿರುವ ಕ್ಯಾಪ್ಟನ್ ಧವನ್: ಅನುಭವಿ ಆಟಗಾರರ ಮಧ್ಯೆ ಯುವ ಪ್ಲೇಯರ್ಸ್ ಜೊತೆ ಕ್ಯಾಪ್ಟನ್ ಶಿಖರ್ ಧವನ್ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಾಳೆಯ ಪಂದ್ಯದಲ್ಲಿ ಶಿಖರ್ ಬಳಗ ಗೆಲುವು ದಾಖಲು ಮಾಡಿದರೆ, ಟೀಂ ಇಂಡಿಯಾದ ಯಾವುದೇ ಕ್ಯಾಪ್ಟನ್ ನಿರ್ಮಾಣ ಮಾಡದಂತಹ ರೆಕಾರ್ಡ್ ಗಬ್ಬರ್ ಸಿಂಗ್ ಹೆಸರಿನಲ್ಲಿ ರಚನೆಯಾಗಲಿದೆ. ಕೆರಿಬಿಯನ್ ನೆಲದಲ್ಲಿ ಇಲ್ಲಿಯವರೆಗೆ ಟೀಂ ಇಂಡಿಯಾದ ಯಾವುದೇ ಕ್ಯಾಪ್ಟನ್ ಕ್ಲೀನ್ ಸ್ವೀಪ್ ಸಾಧನೆ ಮಾಡಿಲ್ಲ. ಈ ಅವಕಾಶ ಧವನ್ಗೆ ಲಭ್ಯವಾಗಿದ್ದು, ನಾಳೆಯ ಪಂದ್ಯದ ಫಲಿತಾಂಶದ ಮೇಲೆ ಎಲ್ಲವೂ ನಿಂತಿದೆ.
ಇತಿಹಾಸ ಸೃಷ್ಟಿಸಲಿರುವ ಯಂಗ್ ಇಂಡಿಯಾ: ನಾಳೆಯ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಮೊದಲ ಬಾರಿಗೆ ಕೆರಿಬಿಯನ್ ನಾಡಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಲಿದೆ. ಈ ಮೂಲಕ ಹೊಸದೊಂದು ದಾಖಲೆ ನಿರ್ಮಾಣಗೊಳ್ಳಲಿದೆ. ಆದರೆ, ಉತ್ತಮ ಪ್ರದರ್ಶನದ ಹೊರತಾಗಿ ಕೂಡ ಎರಡು ಪಂದ್ಯಗಳಲ್ಲಿ ಸೋತಿರುವ ವೆಸ್ಟ್ ಇಂಡೀಸ್ ನಾಳೆಯ ಪಂದ್ಯದಲ್ಲಿ ತಿರುಗೇಟು ನೀಡುವ ತವಕದಲ್ಲಿದೆ.
ಇದನ್ನೂ ಓದಿರಿ: ಟೀಂ ಇಂಡಿಯಾದಲ್ಲಿ ವಿರಾಟ್ ಸ್ಥಾನ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ರಾಬಿನ್ ಉತ್ತಪ್ಪ
ಭಾರತ ತಂಡ : ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ಈಗಾಗಲೆ ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ ನಾಳೆಯ ಪಂದ್ಯಕ್ಕಾಗಿ ಕೆಲವೊಂದು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ. ಬೆಂಚ್ ಕಾಯುತ್ತಿರುವ ಋತುರಾಜ್, ಅರ್ಷದೀಪ್ ಸಿಂಗ್ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.