ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ODI ಸರಣಿಯ ಮೊದಲ ಪಂದ್ಯ ಬಾರ್ಬಡೋಸ್‌ನಲ್ಲಿ ನಡೆಯುತ್ತಿದ್ದು, ವೆಸ್ಟ್ ಇಂಡೀಸ್ ತಂಡವು ಕೇವಲ 114 ರನ್ ಗಳಿಸಿ ಆಲೌಟ್ ಆಗಿದೆ. ಭಾರತದ ಪರ ಕುಲ್ದೀಪ್ ಯಾದವ್ 4 ಹಾಗೂ ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಮಿಂಚಿದ್ದಾರೆ.
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ: ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 23 ಓವರ್ ಗಳಲ್ಲಿ 114 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಶಾಯ್ ಹೋಪ್ ತಂಡದ ಪರ ಗರಿಷ್ಠ 43 ರನ್ ಗಳಿಸಿದರು. ಕುಲ್ದೀಪ್ ಯಾದವ್ 3 ಓವರ್‌ಗಳಲ್ಲಿ 2 ಮೇಡನ್ ಹಾಕಿ ಕೇವಲ 6 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ರವೀಂದ್ರ ಜಡೇಜಾ 6 ಓವರ್ಗಳು ಎಸೆದು 37 ರನ್ಗಳನ್ನು ನೀಡಿ 3 ವಿಕೆಟ್‌ಗಳನ್ನು ಪಡೆದರು.
ಮೊದಲು ಬ್ಯಾಟಿಂಗ್ಗೆ ಇಳಿದ ವೆಸ್ಟ್ ಇಂಡೀಸ್ಗೆ ಉತ್ತಮ ಆರಂಭ ಸಿಗಲಿಲ್ಲ. ಪವರ್‌ಪ್ಲೇಯಲ್ಲಿಯೇ ತಂಡ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಹಾರ್ದಿಕ್ ಪಾಂಡ್ಯ ಭಾರತಕ್ಕೆ ಮೊದಲ ಯಶಸ್ಸು ನೀಡಿದರು. ಹಾರ್ದಿಕ್ ಕೈಲ್ ಮೈಯರ್ಸ್ ಕ್ಯಾಚ್ ಔಟ್ ಮಾಡಿದರು. ಮೈಯರ್ಸ್ 9 ಎಸೆತಗಳಲ್ಲಿ ಎರಡು ರನ್ ಗಳಿಸಿ ಔಟಾದರು. ಇದಾದ ಬಳಿಕ ಮುಖೇಶ್ ಕುಮಾರ್ ಅತ್ನಾಜೆಯನ್ನು ಔಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್ಗೆ ಎರಡನೇ ಪೆಟ್ಟು ನೀಡಿದರು. ಅಲಿಕ್ 18 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು.
ಬ್ರಾಂಡನ್ ಕಿಂಗ್ 23 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ರವೀಂದ್ರ ಜಡೇಜಾ ಹೆಟ್ಮೆಯರ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಅವರ ಮುಂದಿನ ಓವರ್‌ನಲ್ಲಿ ಜಡೇಜಾ ಇಬ್ಬರು ಆಟಗಾರರನ್ನು ಔಟ್ ಮಾಡಿ ಮಿಂಚಿದರು. ಅವರು ಎರಡನೇ ಎಸೆತದಲ್ಲಿ ಪೊವೆಲ್ ಮತ್ತು ನಾಲ್ಕನೇ ಎಸೆತದಲ್ಲಿ ಶೆಫರ್ಡ್ ಅವರನ್ನು ಔಟ್ ಮಾಡಿದರು. ಮುಂದಿನ ಓವರ್‌ನಲ್ಲಿ ಕುಲ್ದೀಪ್ ಯಾದವ್ ಡ್ರೇಕ್ಸ್‌ರನ್ನು ಎಲ್ಬಿಡಬ್ಲ್ಯು ಮಾಡಿದರು. ಕುಲ್ದೀಪ್ ಅವರ ಎರಡನೇ ಓವರ್‌ನಲ್ಲಿಯೂ ಒಂದು ವಿಕೆಟ್ ಪಡೆದರು, ಯಾನಿಕ್ ಕರಿಯಾ 3 ರನ್ ಗಳಿಸಿ ಎಲ್ಬಿಡಬ್ಲ್ಯೂ ಆದರು.
ODI ಸರಣಿಗೆ ಮೊದಲು, ಭಾರತವು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ರಲ್ಲಿ ವಿಂಡೀಸ್ ಅನ್ನು ಸೋಲಿಸಿತು. ಆ ಸರಣಿಯಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಪಾದದ ನೋವಿನಿಂದ ತವರಿಗೆ ಮರಳಿದ್ದಾರೆ ಮತ್ತು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗವಹಿಸುವುದಿಲ್ಲ.
ಓದಿ: ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ, ಫೀಲ್ಡಿಂಗ್ ಆಯ್ಕೆ