ಮೆಲ್ಬೋರ್ನ್ : ಮಹಿಳಾ ಕ್ರಿಕೆಟ್ನಲ್ಲಿ ಅತ್ಯುತ್ತಮ ಟಿ20 ಲೀಗ್ ಆಗಿರುವ ವುಮೆನ್ಸ್ ಬಿಗ್ಬ್ಯಾಶ್ ಲೀಗ್ನಲ್ಲಿ ಈ ಬಾರಿ 8 ಆಟಗಾರ್ತಿಯರು ಆಡುತ್ತಿದ್ದಾರೆ. ಬಹುತೇಕ ಎಲ್ಲಾ ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯರು ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಮಿಂಚಿದ್ದಾರೆ.
ಸಿಡ್ನಿ ಥಂಡರ್ ಥಂಡರ್ ಇಂದಿನ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಥಂಡರ್ 37 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಭಾರತದ ಸ್ಟಾರ್ ಬ್ಯಾಟರ್ ಸ್ಮತಿ 50 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 50 ರನ್ಗಳಿಸಿದರು. ಇದೇ ತಂಡದಲ್ಲಿರುವ ಆಲ್ರೌಂಡರ್ ದೀಪ್ತಿ ಶರ್ಮಾ 15 ಎಸೆತಗಳಲ್ಲಿ 20 ರನ್ಗಳಿಸಿದ್ದಲ್ಲದೆ, 4 ಓವರ್ಗಳಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಮೆಲ್ಬೋರ್ನ್ ರೆನೆಗೇಡ್ಸ್ ತಂಡ ಮತ್ತೊಂದು ಪಂದ್ಯದಲ್ಲಿ ಅಡಿಲೇಡ್ ತಂಡವನ್ನು 4 ವಿಕೆಟ್ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ 46 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ ಅಜೇಯ 73 ರನ್ಗಳಿಸಿ ದಾಖಲೆಯ 162 ರನ್ಗಳನ್ನು ಚೇಸ್ ಮಾಡಲು ನೆರವಾದರು. ಇವರಿಗೆ ಸಾಥ್ ನೀಡಿದ್ದ ಜಮೀಮಾ ರೋಡ್ರಿಗಸ್ ಕೂಡ 16 ಎಸೆತಗಳಲ್ಲಿ 27 ರನ್ ಚಚ್ಚಿದ್ದರು. ಇನ್ನು ಕೌರ್ ಬೌಲಿಂಗ್‌ನಲ್ಲೂ 2 ವಿಕೆಟ್ ಪಡೆದು ಮಿಂಚಿದ್ದರು.
ಸಿಡ್ನಿ ಸಿಕ್ಸರ್ ಪರ ಆಡುತ್ತಿರುವ ರಾಧ ಯಾದವ್ 4 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ಬಿಟ್ಟು ಕೊಟ್ಟು 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪ್ರತಿ ವರ್ಷ ಈ ಲೀಗ್ಗೆ ಕೇವಲ ಇಬ್ಬರು ಮೂರು ಆಟಗಾರ್ತಿಯರು ಮಾತ್ರ ಆಯ್ಕೆಯಾಗುತ್ತಿದ್ದರು. ಆದರೆ, ಈ ಬಾರಿ 8 ಆಟಗಾರ್ತಿಯರು ಆಯ್ಕೆಯಾಗಿದ್ದಾರೆ. ಅಲ್ಲದೆ ಎಲ್ಲಾ ಆಟಗಾರ್ತಿಯರು ತಮ್ಮ ಗೌರವಾನ್ವಿತ ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಸಂತೋಷದ ಸಂಗತಿ. ಮಹಿಳಾ ಐಪಿಎಲ್ ಬಗ್ಗೆ ಕೇಳಿ ಬರುತ್ತಿರುವ ಕೂಗಿಗೆ ಭಾರತೀಯ ಆಟಗಾರ್ತಿಯರ ಪ್ರದರ್ಶನ ಮುನ್ನುಡಿಯಾಗಲಿದೆಯೇ ಕಾದು ನೋಡಬೇಕಿದೆ.
ಇದನ್ನು ಓದಿ:ಸೆಮಿಫೈನಲ್ಸ್, ಫೈನಲ್ಸ್ ತಂಡಗಳನ್ನು ಹೆಸರಿಸಿದ ಶೇನ್ ವಾರ್ನ್