ಕಟಕ್: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಹಾಗೂ ದೇಶೀಯ ಕ್ರಿಕೆಟ್ನ ದೈತ್ಯ ವಾಸೀಂ ಜಾಫರ್ಗೆ ಇದೀಗ ಒಡಿಶಾ ಕ್ರಿಕೆಟ್ ಮಂಡಳಿ ಮಣೆ ಹಾಕಿದ್ದು, ಮುಂದಿನ ಎರಡು ವರ್ಷಗಳ ಅವಧಿಗೆ ತಂಡದ ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಿಕೊಂಡಿದೆ.
ಈ ಹಿಂದೆ ಉತ್ತರಾಖಂಡ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಜಾಫರ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರನ್ನ ಒಡಿಶಾ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಒಡಿಶಾ ಕ್ರಿಕೆಟ್ ಅಸೋಷಿಯೇಷನ್ ಕಾರ್ಯದರ್ಶಿ ಸಂಜಯ್ ಬೆಹ್ರಾ ತಿಳಿಸಿದ್ದಾರೆ. ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿ ಉತ್ತರಾಖಂಡ ಕೋಚ್ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿದ್ದಾಗಿ ಜಾಫರ್ ಹೇಳಿಕೊಂಡಿದ್ದರು.
ಇದನ್ನೂ ಓದಿರಿ: WTC 2021-2023 ಆವೃತ್ತಿ ವೇಳಾಪಟ್ಟಿ ಪ್ರಕಟ... ಪಾಕ್ ವಿರುದ್ಧ ಮುಖಾಮುಖಿಯಾಗಲ್ಲ ಭಾರತ!
ವಾಸೀಂ ಜಾಫರ್ 186 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 14609ರನ್ಗಳಿಕೆ ಮಾಡಿದ್ದಾರೆ. ರಣಜಿ ಕ್ರಿಕೆಟ್ ಪಂದ್ಯಗಳಿಂದ 12,038ರನ್ಗಳಿಸಿರುವ ಜಾಫರ್ 156 ಪಂದ್ಯಗಳನ್ನಾಡಿದ್ದಾರೆ. ಟೀಂ ಇಂಡಿಯಾ ಪರ 31 ಟೆಸ್ಟ್ ಪಂದ್ಯಗಳನ್ನಾಡಿರುವ ಇವರು, ಕೇವಲ 2 ಏಕದಿನ ಪಂದ್ಯಗಳಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ.