ನವದೆಹಲಿ: ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಮಳೆಯಾಟದ ನಡುವೆಯೂ ಯುವ ಆಟಗಾರರಾದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಶ್ರೇಯಸ್ ಅಯ್ಯರ್ ಸಿಕ್ಕ ಅವಕಾಶವನ್ನು ಬಾಚಿಕೊಂಡರು. ಸತತ ವೈಫಲ್ಯ ಕಾಣುತ್ತಿದ್ದರೂ ಅವಕಾಶ ಪಡೆಯುತ್ತಿರುವ ವಿಕೆಟ್ ಕೀಪರ್ ರಿಷಭ್ ಪಂತ್, ದೀಪಕ್ ಹೂಡಾ ಫ್ಲಾಪ್ಶೋ ಮುಂದುವರೆಯಿತು.
ಹಿರಿಯರ ವಿಶ್ರಾಂತಿಯಲ್ಲಿ ಅವಕಾಶ ಪಡೆದ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಶುಭಮನ್ ಗಿಲ್, ಬೌಲಿಂಗ್ನಲ್ಲಿ ಉಮ್ರಾನ್ ಮಲಿಕ್ ಉತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು. ಸರಣಿ ಸೋಲು ಕಂಡರೂ ಕೆಲ ಆಟಗಾರರ ಪ್ರದರ್ಶನ ಗಮನಾರ್ಹವಾಗಿತ್ತು.
ಶ್ರೇಯಸ್, ಸುಂದರ್ ಸೂಪರ್ ಪ್ಲೇ: ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿಸಿದರು. ಮೊದಲ ಪಂದ್ಯದಲ್ಲಿ 80 ರನ್ ಗಳಿಸಿದರೆ, ಮೂರನೇ ಮ್ಯಾಚ್ನಲ್ಲಿ 49 ರನ್ ಗಳಿಸಿದರು. ಇದು ಭಾರತದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಹೌದು.
ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸರಣಿಯಲ್ಲಿ ಯಾವುದೇ ವಿಕೆಟ್ ಪಡೆಯದಿದ್ದರೂ, ಉತ್ತಮ ಎಕಾನಮಿಯಲ್ಲಿ ಬೌಲ್ ಮಾಡಿದರು. ಬ್ಯಾಟಿಂಗ್ನಲ್ಲೂ ಮಿಂಚಿದ ಯುವ ಆಟಗಾರ ಮೊದಲ ಪಂದ್ಯದಲ್ಲಿ 37, ಮೂರನೇ ಪಂದ್ಯದಲ್ಲಿ ಸಂಕಷ್ಟದ ವೇಳೆ 51 ರನ್ ಬಾರಿಸಿ ಅತ್ಯುತ್ತಮ ಕಾಣಿಕೆ ನೀಡಿದರು.
ರಿಷಭ್, ಹೂಡಾ ಫ್ಲಾಪ್ ಶೋ: ಸತತ ವೈಫಲ್ಯ ಕಾಣುತ್ತಿದ್ದರೂ ವಿಕೆಟ್ ಕೀಪರ್ ರಿಷಭ್ ಪಂತ್ ಮಾತ್ರ ಸರಣಿಯಲ್ಲಿ ಬ್ಯಾಟ್ ಬಿಚ್ಚಲೇ ಇಲ್ಲ. ಕಳೆದ 9 ಇನಿಂಗ್ಸ್ನಲ್ಲಿ ಪಂತ್ 27 ರನ್ ಗಳಿಸಿದ್ದೇ ಅಧಿಕವಾಗಿದೆ. ಏಕದಿನ ಮತ್ತು ಟಿ20ಯಲ್ಲಿ 10, 15, 11, 6, 6, 3, 9, 9 ಮತ್ತು 27 ಸ್ಕೋರ್ ಮಾಡಿದ್ದಾರೆ. ಇದು ಪಂತ್ರ ದಯನೀಯ ಬ್ಯಾಟಿಂಗ್ಗೆ ಸಾಕ್ಷಿಯಾಗಿದೆ.
ಇದಲ್ಲದೇ ಸಂಜು ಸ್ಯಾಮ್ಸನ್ ಜಾಗಕ್ಕೆ ಪರ್ಯಾಯವಾಗಿ ಆಡಿದ ಆಲ್ರೌಂಡರ್ ದೀಪಕ್ ಹೂಡಾ ಕೂಡ ಕಳಪೆಯಾಗಿ ಮುಂದುವರಿದಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ಉತ್ತಮ ಬೌಲಿಂಗ್ ಮಾಡಿ 4 ವಿಕೆಟ್ ಪಡೆದಿದ್ದೇ ಸರಣಿಯಲ್ಲಿನ ಸಾಧನೆಯಾಗಿದೆ. ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಇನ್ನುಳಿದಂತೆ ಬೌಲಿಂಗ್ನಲ್ಲಿ ಜಮ್ಮು ಕಾಶ್ಮೀರದ ಶರವೇಗಿಯಾದ ಉಮ್ರಾನ್ ಮಲಿಕ್ 2 ಪಂದ್ಯಗಳಿಂದ 3 ವಿಕೆಟ್ ಕಿತ್ತಿದ್ದಾರೆ. ವಿಶ್ವಕಪ್ನ ಹೀರೋ ಅರ್ಷದೀಪ್ ಸಿಂಗ್ ಸರಣಿಯಲ್ಲಿ ಪ್ರಭಾವಿಯಾಗಲಿಲ್ಲ.
ಓದಿ: AUS vs WI Test: ಶತಕ ಸಿಡಿಸಿ ರೋಹಿತ್, ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಸ್ಮಿತ್