ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ ರಾತ್ರಿ ರೋಚಕ ಓವರ್ನ ಪಂದ್ಯವೊಂದು ನಡೆದದ್ದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತೇ ಇದೆ. ಪಂದ್ಯದ ಮೊದಲ ಓವರ್ ಹಾಗೇ ಮಿಕ್ಕೆರಡು ಓವರ್ಗಳನ್ನು ದಾರಾಳ ರನ್ ಕೊಟ್ಟಿದ್ದ ಅರ್ಶದೀಪ್ ಸಿಂಗ್ ಕೊನೆಯ ಓವರ್ ಮಾಡಲು ಬಂದಾಗ ಪಂದ್ಯ ಗೆಲುವು ದೂರ ಎಂಬಂತಾಗಿತ್ತು.
ಆದರೆ ಅರ್ಶದೀಪ್ ಕೇವಲ 3 ರನ್ ಕೊಟ್ಟು ಪಂದ್ಯವನ್ನು 6 ರನ್ನಿಂದ ಗೆಲ್ಲಿಸಿದ್ದರು. ಪಂದ್ಯದ ನಂತರ ಮಾತನಾಡಿದ ಅವರು ಮೂರು ಓವರ್ನಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದಾಗಿ ಒಪ್ಪಿಕೊಂಡದ್ದಲ್ಲದೇ, ಹೀಗಿದ್ದರೂ ಕಡೆಯ ಓವರ್ನಲ್ಲಿ ತಿದ್ದಿಕೊಳ್ಳಲು ಅವಕಾಶ ಕೊಟ್ಟ ಟೀಮ್ ಮ್ಯಾನೇಜ್ಮೆಂಟ್ಗೆ ಧನ್ಯವಾದ ಹೇಳಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಬ್ಯಾಟ್ ಮಾಡಿತ್ತು. 8 ವಿಕೆಟ್ ಕಳೆದುಕೊಂಡು 161 ರನ್ಗಳ ಸಾಧಾರಣ ಗುರಿಯನ್ನು ಆಸೀಸ್ಗೆ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾವನ್ನು ಟೀಮ್ ಇಂಡಿಯಾ 154ಕ್ಕೆ ಕಟ್ಟಿಹಾಕಿ 6 ರನ್ಗಳ ಜಯ ದಾಖಲಿಸಿತು. ಕೊನೆಯ ಓವರ್ನಲ್ಲಿ ನಡೆದ ಮ್ಯಾಜಿಕ್ ಈ ಗೆಲುವಿಗೆ ಕಾರಣವಾಯಿತು.
"ಆಟದಲ್ಲಿ ನಾನು ಮಾಡಿದ ಮೂರು ಓವರ್ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದೆ. ಅಲ್ಲದೇ ತಂಡದ ಉಳಿದ ಬೌಲರ್ಗಳಿಗಿಂತಲೂ ಹೆಚ್ಚು ರನ್ ನೀಡಿದ್ದೆ. ನಾನು ತಪ್ಪು ಮಾಡಿದ್ದೇನೆ ಎಂಬುದು ನನಗೆ ತಿಳಿದಿತ್ತು. ಆ ತಪ್ಪನ್ನು ತಿದ್ದಿಕೊಳ್ಳಲು ನನಗೆ ಒಂದು ಅವಕಾಶವನ್ನು ದೇವರು ಸೃಷ್ಟಿಸಿದ, ನಾನು ನನ್ನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನನ್ನು ನಂಬಿದ ಸಿಬ್ಬಂದಿಗೆ ಧನ್ಯವಾದಗಳು"ಎಂದು ಹೇಳಿದ್ದಾರೆ.
ಭಾರತದ ಇನ್ನಿಂಗ್ಸ್ ವೇಳೆ ವಿಕೆಟ್ಗಳ ಪತನ ಆದರೂ ಶ್ರೇಯಸ್ ಅಯ್ಯರ್ ಕ್ರೀಸ್ಗೆ ಗಟ್ಟಿಯಾಗಿ ನಿಂತು ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅವರಿಗೆ ಜಿತೇಶ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಕೂಡಾ ಸಾಥ್ ಕೊಟ್ಟಿದ್ದರು. ಇವರುಗಳ ಬ್ಯಾಟಿಂಗ್ನಿಂದ 160 ರನ್ ಗುರಿ ತಲುಪಿತು. ಕಡೆಯಲ್ಲಿ 15-20 ರನ್ ವೇಗವಾಗಿ ಗಳಿಸಿದ್ದ ತಂಡದ ಗೆಲುವಿಗೆ ಸಹಾಯವಾಯಿತು ಎಂದಿದ್ದಾರೆ ಸಿಂಗ್.
ಹೆಚ್ಚುವರಿ ರನ್ ಇದ್ದದ್ದು ಗೆಲುವಿಗೆ ದಾರಿ ಮಾಡಿಕೊಟ್ಟಿತು: "ನಿಜ ಹೇಳಬೇಕೆಂದರೆ, ನನ್ನ ಮನಸ್ಸಿನಲ್ಲಿ ಏನೂ ನಡೆಯುತ್ತಿರಲಿಲ್ಲ. ಸೂರ್ಯಕುಮಾರ್ ಯಾದವ್ ಹೇಳಿದ್ದು ಏನಾಗುತ್ತದೆಯೋ ಅದು ಆಗಲಿ ಎಂದು. ಕ್ರೆಡಿಟ್ ನಮ್ಮ ಬ್ಯಾಟ್ಸ್‌ಮನ್‌ಗಳಿಗೂ ಸಲ್ಲುತ್ತದೆ. ಅವರು ಈ ಟ್ರಿಕಿ ವಿಕೆಟ್‌ನಲ್ಲಿ ನಿಜವಾಗಿಯೂ ಉತ್ತಮ ಮೊತ್ತವನ್ನು ನೀಡಿದರು ಮತ್ತು ಹೆಚ್ಚುವರಿ 15 ರಿಂದ 20 ರನ್‌ಗಳನ್ನು ನಾವು ಹೊಂದಿದ್ದೆವು" ಎಂದಿದ್ದಾರೆ.
ಇದನ್ನೂ ಓದಿ: "ಐಪಿಎಲ್ ಆಡಬೇಡಿ" ಜೋಫ್ರಾ ಆರ್ಚರ್‌ಗೆ ಇಸಿಬಿ ಸೂಚನೆ