ನವದೆಹಲಿ: 2023ರ ವಿಶ್ವಕಪ್ ಸೋಲಿನ ಬಳಿಕ ಭಾರತ ತಂಡ ಈಗ ತನ್ನ ಮುಂದಿನ ಪಂದ್ಯಕ್ಕೆ ಸಿದ್ಧವಾಗಿದೆ. ಗುರುವಾರದಿಂದ ಆಸ್ಟ್ರೇಲಿಯಾ ವಿರುದ್ಧ ಬ್ಲೂ ಬಾಯ್ಸ್ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಪ್ರತಿಷ್ಠಿತ ಸರಣಿ ಆರಂಭವಾಗುವ ಮುನ್ನವೇ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಆಸ್ಟ್ರೇಲಿಯಾದ ಅನುಭವಿ ಓಪನರ್ ಡೇವಿಡ್ ವಾರ್ನರ್ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಭಾಗವಹಿಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಕ್ರಿಕೆಟ್ ಆಸ್ಟ್ರೇಲಿಯಾ ನೀಡಿರುವ ಹೇಳಿಕೆಯಲ್ಲಿ, 'ವಿಶ್ವಕಪ್ ಗೆಲುವಿನ ನಂತರ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಇದೀಗ ಅವರು ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ' ಎಂದು ಉಲ್ಲೇಖಿಸಿದೆ. ಮುಂದಿನ ತಿಂಗಳು ಪಾಕಿಸ್ತಾನ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಡೇವಿಡ್ ವಾರ್ನರ್ ಪಾಲ್ಗೊಳ್ಳಲಿದ್ದಾರೆ. ಈ ಸರಣಿಯು ಅವರ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿಯಾಗಿದೆ. ಇದಾದ ಬಳಿಕ ಅವರು ಈ ಸುದೀರ್ಘ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ.
ಪಾಕ್ ವಿರುದ್ಧದ ಟೆಸ್ಟ್ ಸರಣಿಗೆ ಉತ್ತಮ ತಯಾರಿ ನಡೆಸಲು ಭಾರತದಲ್ಲಿ ನಡೆಯುತ್ತಿರುವ ಟಿ20 ಸರಣಿಯಿಂದ ವಾರ್ನರ್ಗೆ ವಿಶ್ರಾಂತಿ ನೀಡಲಾಗಿದೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯ ನಂತರ ವಾರ್ನರ್ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.
ಈ ಐವರು ಆಟಗಾರರು ತವರಿಗೆ ಪ್ರಯಾಣ: ಡೇವಿಡ್ ವಾರ್ನರ್ ಈಗ ಆಸ್ಟ್ರೇಲಿಯಾಕ್ಕೆ ಮರಳುತ್ತಿದ್ದಾರೆ. ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ಕ್ಯಾಮೆರಾನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಅವರನ್ನು ಭಾರತ ವಿರುದ್ಧದ ಟಿ20 ಸರಣಿಯಿಂದ ಕೈಬಿಡಲಾಗಿದೆ.
ಆರನ್ ಹಾರ್ಡಿ ಎಂಟ್ರಿ: ಡೇವಿಡ್ ವಾರ್ನರ್ ಬದಲಿಗೆ ಆರನ್ ಹಾರ್ಡಿ ಅವರನ್ನು ಭಾರತಕ್ಕೆ ಕಳುಹಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ ನಡೆಸಿದೆ. ಈ ಆಸ್ಟ್ರೇಲಿಯಾದ ಆಲ್‌ರೌಂಡರ್ ಈ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ಆದರೆ, ಕಾಂಗರೂ ತಂಡ ವಾರ್ನರ್ ಅವರನ್ನು ಮಿಸ್ ಮಾಡಿಕೊಳ್ಳುವುದು ಖಚಿತ. 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ (535) ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ.
ಆಸ್ಟ್ರೇಲಿಯಾ ತಂಡ ಈಗ ಹೀಗಿದೆ: ನಾಯಕ ಮ್ಯಾಥ್ಯೂ ವೇಡ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಜೋಸ್ ಇಂಗ್ಲಿಸ್, ಆರನ್ ಹಾರ್ಡಿ, ಜೇಸನ್ ಬೆಹ್ರೆಂಡಾರ್ಫ್, ಶಾನ್ ಅಬಾಟ್, ನಾಥನ್ ಎಲ್ಲಿಸ್, ಕೇನ್ ರಿಚರ್ಡ್ಸನ್, ಝಂಪಾ, ತನ್ವೀರ ಸಂಘ.
ಓದಿ: ವಿರಾಟ್ ವಿಕೆಟ್ ಪಡೆದಾಗ ಲಕ್ಷಾಂತರ ಅಭಿಮಾನಿಗಳ ಮೌನ ಬಹಳ ತೃಪ್ತಿ ನೀಡಿತು: ಆಸ್ಟ್ರೇಲಿಯಾ ನಾಯಕ ಕಮಿನ್ಸ್