ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಆಟಗಾರ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಅವರು ಜೂನ್ ಅಂತ್ಯದಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ 2 ಟಿ 20 ಪಂದ್ಯಗಳಿಗೆ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗ್ತಿದೆ.
ಈ ಬಗ್ಗೆ ಖಾಸಗಿ ವಾಹಿನಿಯೊಂದು ಸುದ್ದಿ ಬಿತ್ತರಿಸಿದ್ದು, ಜೂನ್ 26 ಮತ್ತು 28 ರಂದು ಐರ್ಲೆಂಡ್ ವಿರುದ್ಧ ಭಾರತ 2 ಟಿ-20 ಪಂದ್ಯಗಳನ್ನು ಆಡಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಟಿ-20, 1 ಟೆಸ್ಟ್ ಪಂದ್ಯ ಆಡಲಿದ್ದು, ಅದಕ್ಕೆ ರಾಹುಲ್ ದ್ರಾವಿಡ್ ಅವರೇ ಕೋಚ್ ಆಗಿರುತ್ತಾರೆ. ಐರ್ಲೆಂಡ್ ವಿರುದ್ಧದ 2 ಪಂದ್ಯಗಳಿಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಕೋಚ್ ಆಗಿ ಕೆಲಸ ಮಾಡಲು ಬಿಸಿಸಿಐ ಕೋರಿದೆ. ಇದಕ್ಕೆ ವಿವಿಎಸ್ ಲಕ್ಷ್ಮಣ್ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ರವಿಶಾಸ್ತ್ರಿ ಅವರು ಭಾರತದ ತಂಡದ ಕೋಚ್ ಆಗಿದ್ದಾಗ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯ ನೇತೃತ್ವ ವಹಿಸಿದ್ದರು. ಇದೇ ಅವಧಿಯಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಗಳ ಸರಣಿಗೆ ರಾಹುಲ್ ದ್ರಾವಿಡ್ ಭಾರತ ತಂಡದ ಇನ್ನೊಂದು ತಂಡದ ಕೋಚ್ ಆಗಿದ್ದರು.
ಓದಿ: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ.. 13 ಸದಸ್ಯರ ತಂಡ ಪ್ರಕಟಿಸಿದ ಇಂಗ್ಲೆಂಡ್, ಬ್ರಾಡ್ಗೆ ಮಣೆ