ಅಹ್ಮದಾಬಾದ್ : ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾನುವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಒಂದು ಶತಕ ಸಿಡಿಸಿದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 10 ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಪ್ರಸ್ತುತ ವಿರಾಟ್ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ತಲಾ 9 ಶತಕ ಸಿಡಿಸಿ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದಾರೆ. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ಸಿಡಿಸಿದ್ದರೆ, ಕೊಹ್ಲಿ 39 ಪಂದ್ಯಗಳಲ್ಲಿ ವಿಂಡೀಸ್ ವಿರುದ್ಧ 9 ಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ಶತಕ ಸಿಡಿಸಿ ಎರಡೂವರೆ ವರ್ಷಗಳಾಗಿವೆ. ಅವರು 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದರು. ಆದರೆ, 2022 ಅನ್ನು ಅತ್ಯುತ್ತಮವಾಗಿ ಆರಂಭಿಸಿರುವ ಅವರು, ಎಲ್ಲಾ ಸ್ವರೂಪಗಳಿಂದ 4 ಪಂದ್ಯಗಳನ್ನಾಡಿದ್ದರು.
44ರ ಸರಾಸರಿಯಲ್ಲಿ 224 ರನ್ಗಳಿಸಿದ್ದಾರೆ. ಇದೀಗ ನಾಯಕತ್ವ ತ್ಯಜಿಸಿರುವ ಅವರು ಕೇವಲ ಬ್ಯಾಟರ್ ಆಗಿದ್ದು, ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಲು ಅವಕಾಶ ಇರುವುದರಿಂದ ಹಲವು ವಿಶ್ವದಾಖಲೆಗಳನ್ನು ಮುರಿಯುವ ಅವಕಾಶ ಸಿಕ್ಕಿದೆ.
ಒಂದು ವೇಳೆ ಈ ಸರಣಿಯಲ್ಲಿ ಕೊಹ್ಲಿ ಶತಕ ಸಿಡಿಸಿದ್ದೇ ಆದರೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ಶತಕ ಸಿಡಿಸಿದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್(71) ಜೊತೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಧವನ್-ರಾಹುಲ್ ಅನುಪಸ್ಥಿತಿ: ಹೊಸ ಆರಂಭಿಕನನ್ನ ಖಚಿತ ಪಡಿಸಿದ ರೋಹಿತ್ ಶರ್ಮಾ