ಮುಂಬೈ: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಾವೂ ಅಲಭ್ಯರಾಗುವುದಾಗಿ ಇದುವರೆಗೂ ಔಪಚಾರಿಕವಾಗಿ ಎಲ್ಲೂ ಹೇಳಿಲ್ಲ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಗಾಯಗೊಂಡು ಹೊರಬಿದ್ದ ಬೆನ್ನಲ್ಲೇ ಟೆಸ್ಟ್ ತಂಡದ ನಾಯಕ ವಿರಾಟ್ ತಾವೂ ಏಕದಿನ ಸರಣಿಯ ವೇಳೆ ಆಯ್ಕೆಗೆ ಲಭ್ಯರಿರುವುದಿಲ್ಲ ಎಂದು ಮನವಿ ಮಾಡಿದ್ದಾರೆ ಎಂಬ ವರದಿಗಳು ಭಾರಿ ಸದ್ದು, ಮಾಡಿದ್ದು, ಇದರಿಂದ ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಬಿರುಕು ಮೂಡಿದೆ ಎಂಬ ಅನುಮಾನ ಮೂಡಿತ್ತು.
ಇಲ್ಲಿಯವರೆಗೆ ವಿರಾಟ್ ಕೊಹ್ಲಿ ತಾವು ಏಕದಿನ ಸರಣಿಯನ್ನು ಆಡದಿರುವುದರ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಥವಾ ಕಾರ್ಯದರ್ಶಿ ಜಯ್ ಶಾ ಅವರಿಗೆ ಯಾವುದೇ ರೀತಿಯ ಔಪಚಾರಿಕ ವಿನಂತಿ ಮನವಿಯನ್ನು ಮಾಡಿಲ್ಲ. ಆದರೆ, ಮುಂದೆ ಏನಾದರೂ ಅವರು ನಿರ್ಧರಿಸಿದರೆ ಅಥವಾ ಗಾಯಗೊಂಡರೆ ಹೊರಗುಳಿಯಬಹುದಷ್ಟೇ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
" ಇಂದಿನ ಮಟ್ಟಿಗೆ ವಿರಾಟ್ ದಕ್ಷಿಣ ಆಫ್ರಿಕಾ ವಿರುದ್ಧ ಜನವರಿ 19,21 ಮತ್ತು 23ರ ವರೆಗೆ ನಡೆಯಲಿರುವ ಏಕದಿನ ಸರಣಿಗೆ ಲಭ್ಯರಾಗಲಿದ್ದಾರೆ ಮತ್ತು ಕುಟುಂಬದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ. ಒಂದು ವೇಳೆ ಟೆಸ್ಟ್ ಸರಣಿಯ ನಂತರ ಬಬಲ್ ಭೀತಿಯಿಂದ ಬ್ರೇಕ್ ಬೇಕು ಎನಿಸಿದರೆ ಖಂಡಿತ ಅವರು ಆಯ್ಕೆ ಸಮಿತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಶಾ ಅವರಿಗೆ ತಿಳಿಸುತ್ತಾರೆ" ಪಿಟಿಐಗೆ ಬಿಸಿಸಿಐ ಮೂಲ ಸ್ಪಷ್ಟಪಡಿಸಿದೆ.
ಕೆಲವು ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯ ನಂತರ ತಮ್ಮ ಮಗಳ ಮೊದಲ ಜನ್ಮದಿನವನ್ನಾಚರಿಸಲು 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಬರಲಿದ್ದಾರೆ ಎನ್ನಲಾಗಿತ್ತು. ಪ್ರಸ್ತುತ ಬಿಸಿಸಿಐ ಮಾಹಿತಿಯ ಪ್ರಕಾರ ಇದೆಲ್ಲಾ ಕೇವಲ ವದಂತಿ ಎನ್ನಲಾಗುತ್ತಿದೆ.
ಇದನ್ನೂ ಓದಿ:ಭಾರತದ ವಿರುದ್ಧ ಮೊದಲ ಬಾರಿ ಏಕದಿನ ಸರಣಿ ಆಡಲಿದೆ ಅಫ್ಘಾನಿಸ್ತಾನ