ಪಾರ್ಲ್( ದಕ್ಷಿಣ ಆಫ್ರಿಕಾ): ದಕ್ಷಿಣ ಅಫ್ರಿಕಾ ವಿರುದ್ಧ ಉತ್ತಮ ಲಯದಲ್ಲಿ ಆಡುತ್ತಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಸಿಡಿಸಬಹುದು ಎಂದು ಉತ್ಸಾಹದಿಂದ ಕಾಯುತ್ತಿದ್ದ ಭಾರತೀಯ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಿದೆ.
ಪಾರ್ಲ್ನ ಬೋಲೆಂಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅತಿಥೇಯ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್ ಕಳೆದುಕೊಂಡು 296 ರನ್ಗಳಿಸಿತ್ತು. ಬವೂಮ 110(143 ಎಸೆತ) ಮತ್ತು ವ್ಯಾನ್ ಡರ್ ಡಸೆನ್ 129(96) ರನ್ಗಳಿಸಿದ್ದರು.
ಇನ್ನು 297 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಭಾರತ ತಂಡ ರಾಹುಲ್(12) ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆ ಅನುಭವಿಸಿತು. ಆದರೆ 2ನೇ ವಿಕೆಟ್ಗೆ 92 ರನ್ಗಳ ಜೊತೆಯಾಟ ನೀಡುವ ಮೂಲಕ ಕೊಹ್ಲಿ ಮತ್ತು ಧವನ್ ಚೇತರಿಕೆ ನೀಡಿದ್ದರು.
ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಪಡೆದ ಆರಂಭ ನೋಡಿ ಈ ಪಂದ್ಯದಲ್ಲಾದರೂ ಶತಕ ಸಿಡಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ವಿರಾಟ್ 63 ಎಸೆತಗಳಲ್ಲಿ 3 ಬೌಂಡರಿ ಸಹಿತ 51 ರನ್ಗಳಿಸಿ ಶಮ್ಸಿ ಬೌಲಿಂಗ್ನಲ್ಲಿ ಬವೂಮಗೆ ಕ್ಯಾಚ್ ನೀಡಿ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಶತಕದ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಅಭಿಮಾನಿಗಳು ಮತ್ತೆ ಕಾಯುವಂತಾಯಿತು.
ಆರು ವರ್ಷಗಳ ಕಾಲ ನಾಯಕನಾಗಿದ್ದ ಕೊಹ್ಲಿ 2016ರ ನಂತರ ಕೇವಲ ಬ್ಯಾಟ್ಸ್ಮನ್ ಆಗಿ ಮೊದಲ ಪಂದ್ಯವನ್ನಾಡಿ, ಅರ್ಧಶತಕ ಸಾಧನೆ ಮಾಡಿದರು. ಏಕದಿನ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಶಿಖರ್ ಧವನ್ 84 ಎಸೆತಗಳಲ್ಲಿ 10 ಬೌಂಡರಿ ಸಹಿತ 79 ರನ್ಗಳಿಸಿ ಕೇಶವ್ ಮಹಾರಾಜ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
23 ನವೆಂಬರ್ 2019ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದರು. ಏಕದಿನ ಕ್ರಿಕೆಟ್ನಲ್ಲಿ 2019ರ ಜೂನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 114 ರನ್ಗಳಿಸಿದ್ದರು. ಕಳೆದ 63 ಇನ್ನಿಂಗ್ಸ್ಗಳಿಂದ ವಿರಾಟ್ ಕೊಹ್ಲಿ ಮೂರಂಕಿ ದಾಟುವಲ್ಲಿ ವಿಫಲರಾಗುತ್ತಿದ್ದಾರೆ.
ಇದನ್ನೂ ಓದಿ:Ind vs SA ODI: ಸಚಿನ್, ದ್ರಾವಿಡ್,ಗಂಗೂಲಿ ದಾಖಲೆಗಳನ್ನು ಬ್ರೇಕ್ ಮಾಡಿದ ಕಿಂಗ್ ಕೊಹ್ಲಿ