ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಓವರ್ ಮಾಡಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ಐಪಿಎಲ್ ಮಂಡಳಿ 12 ಲಕ್ಷ ರೂ ದಂಡ ವಿಧಿಸಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ 191 ರನ್ಗಳಿಸಿದರೆ, ಇದಕ್ಕುತ್ತರವಾಗಿ ಆರ್ಸಿಬಿ 122 ರನ್ಗಳಿಸಿ 69 ರನ್ಗಳ ಸೋಲು ಕಂಡಿತ್ತು.
" ಏಪ್ರಿಲ್ 25 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಅವರ ತಂಡ ನಿಧಾನಗತಿ ಓವರ್ ದರವನ್ನು ಕಾಯ್ದುಕೊಂಡಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
" ಐಪಿಎಲ್ ನ ನೀತಿ ಸಂಹಿತೆಯಡಿ ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಇದು ಆರ್ಸಿಬಿ ತಂಡದ ಮೊದಲ ಅಪರಾಧವಾಗಿರುವುದರಿಂದ ನಾಯಕ ಕೊಹ್ಲಿಗೆ ಮಾತ್ರ 12 ಲಕ್ಷ ತಂಡ ವಿಧಿಸಲಾಗಿದೆ " ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಐಪಿಎಲ್ನಲ್ಲಿ ಮೊದಲ ಬಾರಿಗೆ ನಿಧಾನಗತಿ ಓವರ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಪುನಾರಾವರ್ತಿಸಿದರೆ, ನಾಯಕನಿಗೆ 24 ಲಕ್ಷ ಮತ್ತು ತಂಡದ ಇತರ ಸದಸ್ಯರಿಗೆ ತಲಾ 6 ಲಕ್ಷ ರೂ ದಂಡದ ಶಿಕ್ಷೆ ವಿಧಿಸಲಾಗುತ್ತದೆ. 3ನೇ ಬಾರಿಗೆ ತಪ್ಪು ಮಾಡಿದರೆ, ನಾಯಕನಿಗೆ 30 ಲಕ್ಷ ರೂ ಮತ್ತು ಒಂದು ಪಂದ್ಯ ನಿಷೇಧ, ಉಳಿದ ಆಟಗಾರರಿಗೆ 12 ಲಕ್ಷ ದಂಡದ ಶಿಕ್ಷೆ ನಿಗದಿ ಮಾಡಲಾಗಿದೆ
ಇದನ್ನು ಓದಿ:ಐಪಿಎಲ್ನಲ್ಲಿ ಅರ್ಧಶತಕದ ಜೊತೆ 3 ವಿಕೆಟ್ ಪಡೆದ ಟಾಪ್ ಆಲ್ರೌಂಡರ್ಗಳ ಪಟ್ಟಿ ಇಲ್ಲಿದೆ