ಮುಂಬೈ: ಭಾರತದಲ್ಲಿ ಎರಡನೇ ಅಲೆ ಕೊರೊನಾ ಎಲ್ಲೆ ಮೀರಿದೆ. ಲಕ್ಷಾಂತರ ಜನರು ಸಮಸ್ಯೆಗೀಡಾಗುತ್ತಿದ್ದಾರೆ. ಇಂತಹವರಿಗೆ ನೆರವಾಗಲಿ ಎಂದು ಟೀಮ್ ಇಂಡಿಯಾ ನಾಯಕ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಆನ್ಲೈನ್ ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದ್ದರು. ಇದೀಗ ಅದು 5 ಕೋಟಿ ರೂ ದಾಟಿದ್ದು, 7 ಕೋಟಿ ರೂ ಟಾರ್ಗೆಟ್ ಮುಟ್ಟಲು ಇನ್ನು 1.78 ಕೋಟಿ ರೂ ಅವಶ್ಯಕತೆಯಿದೆ.
ಸೆಲೆಬ್ರೆಟಿ ದಂಪತಿ ಕೋವಿಡ್ ಹೋರಾಟಕ್ಕೆ ನೆರವಾಗಲು 2 ಕೋಟಿ ರೂ ದೇಣಿಗೆ ನೀಡಿದ್ದರು. ಅಲ್ಲದೇ ಭಾರತದಾದ್ಯಂತ ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ನೆರವಾಗಲೂ ಆನ್ಲೈನ್ನಲ್ಲಿ 7 ಕೋಟಿರೂ ದೇಣಿಗೆ ಸಂಗ್ರಹ ಮಾಡುವ ಅಭಿಯಾನ ಆರಂಭಿಸಿದ್ದರು. ಇದೀಗ ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ಮಂಗಳವಾರಕ್ಕೆ 5 ಕೋಟಿ ರೂ ದಾಟಿ ಮುನ್ನುಗ್ಗುತ್ತಿದೆ.
ಮಂಗಳವಾರ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಕೆಟ್ಟೋ ಸಹಯೋಗದಲ್ಲಿ ನಡೆಯುತ್ತಿರುವ ಸಂಗ್ರಹ ನಿಧಿಯ ಅಪ್ಡೇಟ್ ನೀಡಿದ್ದಾರೆ. ತಮ್ಮ ಅಭಿಯಾನ 5 ಕೋಟಿ ರೂ ದಾಟಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.
ಇನ್ನು ಸಂಗ್ರಹವಾಗುವ 7 ಕೋಟಿರೂಗಳಲ್ಲಿ ಭಾರತದಾದ್ಯಂತ ಆಮ್ಲಜನಕ ಕೊರತೆ ನೀಗಿಸುವುದಕ್ಕೆ, ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಮತ್ತು ಆಕ್ಸಿನ್ ಸ್ಥಾವರಗಳ ನಿರ್ಮಾಣಕ್ಕೆ ಹಾಗೂ ವೈದ್ಯಕೀಯ ಸೇವೆ ಹೆಚ್ಚಿಸುವುದಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೆಟ್ಟೋ ನಿಧಿ ಸಂಗ್ರಹ ಪೇಜ್ನಲ್ಲಿ ವಿವರಣೆ ನೀಡಲಾಗಿದೆ.
ಇದನ್ನು ಓದಿ:ಅದು ಯಾರೇ ಆಗಲಿ, ಕೊರೊನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಪ್ರವಾಸದಿಂದ ಗೇಟ್ ಪಾಸ್: ಬಿಸಿಸಿಐ ಎಚ್ಚರಿಕೆ